ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಗೆ ಒತ್ಥಾಯಿಸಿ ಮಾದಿಗ ದಂಡೋರ ಎಂಆರ್‌ಪಿಎಸ್ ಸಂಘಟನೆಯು ನವೆಂಬರ್ 18ರಂದು ಹೈದರಾಬಾದ್ ಚಲೋಗೆ ಕರೆ ಕೊಟ್ಟಿದೆ. ಚಲೋಗೆ ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟವು ಬೆಂಬಲ ನೀಡುತ್ತದೆ ಎಂದು ಒಕ್ಕೂಟದ ಸಂಚಾಲಯ ಮಂಜುನಾಥ ಕೊಂಡಪಲ್ಲಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಡೆಯ ಅಧಿವೇನವು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ. ಆ ವೇಳೆ, ಒಳ ಮೀಸಲಾತಿ ಜಾರಿ ಬಗ್ಗೆ ಚರ್ಚಿಸಿ ಅಂಗೀಕರಿಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ MRPS ನವೆಂಬರ್ 18ರಂದು ಹೈದರಾಬಾದ್ ಚಲೋಗೆ ಕರೆಕೊಟ್ಟಿದೆ. ಈಗಾಗಲೇ ಅಕ್ಟೋಬರ್ 7ರಿಂದ ತೆಲಂಗಾಣದ ಆಲಂಪುರದಿಂದ ಹೈದರಾಬಾದ್‌ಗೆ 250 ಕಿ.ಮೀ ‘ವಿಶ್ವರೂಪ ಮಹಾ ಪಾದಯಾತ್ರೆ’ ಆರಂಭಿಸಿದೆ. ನವೆಂಬರ್ 18ರಂದು ಹೈದರಾಬಾದ್‌ನಲ್ಲಿ ಮಾದಿಗರ ‘ವಿಶ್ವರೂಪ ಬೃಹತ್ ಸಮಾವೇಶ’ ನಡೆಯಲಿದೆ” ಎಂದು ಅವರು ತಿಳಿಸಿದ್ದಾರೆ.
“ಕರ್ನಾಟಕದಲ್ಲಿ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು ‘ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟ’ ಮತ್ತು ಹಲವಾರು ಹೋರಾಟಗಾರರು ಹೋರಾಟ ನಡೆಸಿದ್ದರು. ಕಳೆದ ಜನವರಿಯಲ್ಲಿ ಒಕ್ಕೂಟವು ಹುಬ್ಬಳ್ಳಿಯಲ್ಲಿ 68 ದಿನಗಳ ಅನಿರ್ಧಿಷ್ಠಾವಧಿಯ ಧರಣಿ ಸತ್ಯಾಗ್ರಹ ನಡೆಸಿತ್ತು. ಎಲ್ಲರ ಹೋರಾಟದ ಫಲವಾಗಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ ತಿಂಗಳಿನಲ್ಲಿ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಒಳಮೀಸಲಾತಿ ಪ್ರಸ್ತಾವನೆ ಬಗ್ಗೆ ಕೇಂದ್ರವು ಚರ್ಚಿಸಿ, ಜಾರಿಗೊಳಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದ್ದಾರೆ.
“ಮಂದಕೃಷ್ಣ ಮಾದಿಗ ಅವರು ಸುಪ್ರೀಂ ಕೋರ್ಟಿನಲ್ಲಿ ಒಳಮೀಸಲಾತಿಗಾಗಿ ಸಲ್ಲಿಸಿದ್ದ ಪಿಟಿಷನ್ ಅರ್ಜಿಯನ್ನು ಕಳೆದ ವಾರ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಗೆ ಪರಿಗಣಿಸಿದೆ” ಎಂದು ತಿಳಿಸಿದ್ದಾರೆ.
“ಒಳಮೀಸಲಾತಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಹೈದರಾಬಾದ್ ಚಲೋಗೆ ಕರೆಕೊಡಲಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಅಂದಾಜು 25-30 ಲಕ್ಷ ಜನ ಹೈದರಾಬಾದ್‌ನಲ್ಲಿ ಒಂದೆಡೆ ಸೇರಲಿದ್ದಾರೆ. ಉತ್ತರ ಕರ್ನಾಟಕದ ವಿವಿಧ ಮೂಲೆಗಳಿಂದಲೂ ಮಾದಿಗ ಸಮುದಾಯ ಮತ್ತು ಮಾದಿಗ ಉಪಜಾತಿಗಳ ಸಮುದಾಯಗಳ ಜನರು ಸಮಾವೇಶಕ್ಕೆ ತೆರಳಲಿದ್ದಾರೆ” ಎಂದು ಅವರು ತಳಿಸಿದ್ದಾರೆ.
ಈ ವೇಳೆ, ಹಿರಿಯ ಮುಖಂಡ ಜಯರಾಮ ಜನ್ನಿ, ಪ್ರಕಾಶ ಹುಬ್ಬಳ್ಳಿ, ಗಂಗಾಧರ ಪೇರೂರು, ದುರ್ಗಪ್ಪ ಪೂಜಾರ, ಗೋವಿಂದ ಬಂಡಮೀದಪಲ್ಲಿ, ಸೋಮಶೇಖರ ಸಾಕೆ, ಪ್ರಕಾಶ ಕನಮಕ್ಕಲ, ಸಿ ವಿ ಸ್ವಾಮಿ, ಕುಲ್ಲಾಯಪ್ಪ ಮಂತ್ರಿ, ರಾಜೇಶ ಮಂತ್ರಗಾರ, ಗೋಪಾಲ ದೊಡ್ಡಮನಿ, ಮಲ್ಲಪ್ಪ ದೇವಸುರ, ಸತ್ಯನಾರಾಯಣ ಎಂ, ಶ್ರೀಕಾಂತ ಮದರಕಲ್ಲ ಇನ್ನೂ ಮುಂತಾದವರು ಇದ್ದರು.