ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಹರಿಹರದಿಂದ ರಾಜಧಾನಿ ಬೆಂಗಳೂರಿಗೆ ಹೊರಟಿರುವ ಕ್ರಾಂತಕಾರಿ ಪಾದಯಾತ್ರೆಯನ್ನು ಭಾನುವಾರ ತುಮಕೂರು ನಗರಕ್ಕೆ ಮುಖಂಡರು ಸ್ವಾಗತಿಸಿ ಬರಮಾಡಿಕೊಂಡರು.
ಈ ವೇಳೆ ಬಿಜಿಎಸ್ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾದಯಾತ್ರೆಯ ನೇತೃತ್ವ ವಹಿಸಿರುವ ಭಾಸ್ಕರ್ ಪ್ರಸಾದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಮಾದಿಗ ಸಮುದಾಯದವರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ನಮ್ಮದು ನ್ಯಾಯುತ ಹೋರಾಟ, ಯಾರ ಹಕ್ಕನ್ನೂ ಕಸಿಯುವ ಉದ್ದೇಶವಲ್ಲ, ನಮ್ಮ ಹಕ್ಕು ಪಡೆಯುವ ಹೋರಾಟ. ಸುಪ್ರೀಂ ಕೊರ್ಟ್ ಒಳಮೀಸಲಾತಿ ಜಾರಿ ಮಾಡಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದೆ ಆಯೋಗ ರಚಿಸಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಭಾಸ್ಕರ್ ಪ್ರಸಾದ್ ತಿಳಿಸಿದರು.
ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗಿದೆ. ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ದಲಿತ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದೆ. ಸಮುದಾಯ ಒಗ್ಗಟ್ಟಾಗಿದೆ. ಹೋರಾಟ ತೀವ್ರವಾಗಿದೆ. ಸರ್ಕಾರಕ್ಕೆ ಬದ್ಧತೆಯಿದ್ದರೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಹೈ ಕೋರ್ಟ್ ನ್ಯಾಯವಾದಿ ಅರುಣ್‌ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ವಿರೋಧಿ, ಒಳಮೀಸಲಾತಿ ವಿರೋಧಿ. ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ಒಳಮೀಸಲಾತಿ ಜಾರಿಗೆ ಪ್ರಯತ್ನ ಮಾಡುತ್ತಿದ್ದರು. ಆದರೆ ಜಾರಿ ಮಾಡಲು ನೆಪ ಹೇಳಿಕೊಂಡು ಮೀನಾಮೇಷ ಎಣಿಸುತ್ತಿರುವುದನ್ನು ಸಹಿಸಲಾಗುವುದಿಲ್ಲ ಎಂದರು.
ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಒಳಮೀಸಲಾತಿ ಹೋರಾಟ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ನಡೆಯುತ್ತಿದೆ. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಆಯಾ ಸರ್ಕಾರಗಳಿಗೆ ಅವಕಾಶವಿದೆ ಎಂದು ಉಚ್ಛ ನ್ಯಾಯಾಲಯವೇ ತಿಳಿಸಿದೆ, ಆದರೂ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಒಳಮೀಸಲಾತಿ ಜಾರಿ ಮಾಡಲು ಮನಸಿಲ್ಲ, ಅಧಿಕಾರದಲ್ಲಿರುವವವರಿಗೆ ಮಾದಿಗ ಸುಮುದಾಯದ ಸಂಕಷ್ಟಗಳ ಅರಿವಿಲ್ಲ, ನಮ್ಮವರಿಗೆ ಅರಿವಿದ್ದವರೂ ಅಧಿಕಾರಕ್ಕೆ ಅಂಟಿ ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದು ಟೀಕಿಸಿದರು.

ಅಧಿಕಾರದ ಆಸೆಯ ನಮ್ಮವರ ಕುಮ್ಮಕ್ಕಿನಿಂದಲೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತ ವಿರೋಧಿ ಧೋರಣೆ ತಳೆದಿದೆ. ಇಲ್ಲವಾಗಿದ್ದಲ್ಲಿ ಒಳಮೀಸಲಾತಿ ಜಾರಿ ಮಾಡುತ್ತಿದ್ದರು. ಹಳ್ಳಿಗಳಲ್ಲಿ ಮಾದಿಗ ಸಮುದಾಯದವರು ಯಾವ ಪರಿಸ್ಥಿಯಲ್ಲಿದ್ದಾರೆ ಎಂದು ಇವರಿಗೆ ತಿಳಿದಿದೆಯೇ ? ಮಾದಿಗರ ಕಷ್ಟ ಅವರಿಗೆ ಬೇಕಾಗಿಲ್ಲ, ಅಧಿಕಾರ, ಕುರ್ಚಿ ಉಳಿಸಿಕೊಳ್ಳುವುದೇ ಮುಖ್ಯ ಹೊರತು ದಲಿತರ ಹಿತ ಬೇಕಾಗಿಲ್ಲ ಎಂದರು.
ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ದಲಿತ ಮುಖಂಡರಾದ ಕೊಟ್ಟ ಶಂಕರ್, ಕೋಡಿಯಾಲ ಮಹದೇವ್, ಬಂಡೆ ಕುಮಾರ್, , ಪಿ.ಎನ್.ರಾಮಯ್ಯ, ಎನ್.ಆರ್.ಕಾಲೋನಿ ಕಿರಣ್, ಮರಳೂರು ಕೃಷ್ಣಮೂರ್ತಿ, ಮೋಹನ್‌ಕುಮಾರ್, ಮಲ್ಲಿಕ್, ಕ್ಯಾತ್ಸಂದ್ರ ನರಸಿಂಹಮೂರ್ತಿ, ಹನುಮೇಶ್ ಗುಡೂರು ಮೊದಲಾದ ಮುಖಂಡರು ಭಾಗವಹಿಸಿದ್ದರು.
