ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಘಟಕ ಬೃಹತ್ ಪ್ರತಿಭಟನೆ ನಡೆಸಿತು.
ಒಳಮೀಸಲಾತಿ ನಿರೀಕ್ಷೆಯಲ್ಲಿರುವ ಸಮುದಾಯಗಳು ಮತ್ತು ಇದರಿಂದ ಯಾವುದೇ ಹೊಸ ನೇಮಕಾತಿಗಳಿಲ್ಲದೆ ಎಲ್ಲಾ ವರ್ಗದ ಲಕ್ಷಾಂತರ ವಿದ್ಯಾರ್ಥಿ, ನಿರುದ್ಯೋಗಿ ಯುವಜನರು ಆತಂಕದಲ್ಲಿದ್ದಾರೆ ಎಂದು ದವಿಪ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಆರೋಪಿಸಿದರು.
“ಮೂರು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಹೋರಾಟಗಾರ ತಾಳ್ಮೆ ಕಟ್ಟೆ ಒಡೆದಿದೆ. ಜೊತೆಗೆ ಉದ್ಯೋಗ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿ, ನಿರುದ್ಯೋಗಿ ಯುವಜನರ ವಯಸ್ಸು ಮೀರುತ್ತಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿವೆ. ಪೊಲೀಸ್ ಅಧಿಕಾರಿಗಳ ಕೊರತೆಯೂ ಅಧಿಕವಾಗಿರುವುದಕ್ಕೆ ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಯೇ ಸಾಕ್ಷಿ” ಎಂದು ಕಿಡಿಕಾರಿದರು.
“ರಾಜ್ಯದಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಇಂಧನ ಇಲಾಖೆ, ಆರ್ಥಿಕ ಇಲಾಖೆ, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ, ತೋಟಗಾರಿಕಾ ಇಲಾಖೆ, ಶಿಕ್ಷಣ ಇಲಾಖೆ ಜೊತೆಗೆ ಇನ್ನೂ ಹಲವಾರು ಇಲಾಖೆಗಳಲ್ಲಿನ ಅಧಿಸೂಚನೆಗಳು ನೆನೆಗುದಿಗೆ ಬಿದ್ದಿದ್ದು, ಒಳಮೀಸಲಾತಿ ವರದಿ ವಿಳಂಬದಿಂದಾಗಿ ಯಾವುದೇ ನೇಮಕಾತಿಗಳಿಲ್ಲದೇ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಆದ್ದರಿಂದ ಮಾನ್ಯ ರಾಜ್ಯ ಸರ್ಕಾರ ಮೂರು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಹೋರಾಟಗಾರ ತ್ಯಾಗ ಮತ್ತು ಬಲಿದಾನ ಜೊತೆಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸುವ ಮೂಲಕ ಶೀಘ್ರವೇ ಒಳಮೀಸಲಾತಿ ಜಾರಿಮಾಡಿ, ಹೊಸ ನೇಮಕಾತಿ ಅಧಿಸೂಚನೆ ಹೊರಡಿಸುವ ಮೂಲಕ ನಾಡಿನ ಎಲ್ಲಾ ವರ್ಗದ ವಿದ್ಯಾರ್ಥಿ ಯುವಜನರಿಗೆ ಉದ್ಯೋಗ ನೀಡಬೇಕು” ಎಂದು ಆಗ್ರಹಿಸಿದರು.
ದವಿಪ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಮಾತನಾಡಿ, “ಮೂರು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಸಮುದಾಯದ ಬೇಡಿಕೆಯನ್ನು ಶೀಘ್ರವೇ ಈಡೇರಿಸಬೇಕು. ದಲಿತ ವಿದ್ಯಾರ್ಥಿ ಪರಿಷತ್ ಈಗಾಗಲೇ ಹಲವು ಬಾರಿ ಒಳಮೀಸಲಾತಿಗಾಗಿ ಹೋರಾಡಿ ಸರ್ಕಾರಕ್ಕೆ ಆಗ್ರಹಿಸುತ್ತ ಬಂದಿದೆ. ಈಗ ಹೋರಾಟಗಾರ ತಾಳ್ಮೆ ಕಟ್ಟೆ ಒಡೆದಿದೆ. ಸರ್ಕಾರ ಮತ್ತೆ ತಾಳ್ಮೆ ಪರೀಕ್ಷೆ ಮಾಡುವ ದುಸ್ಸಾಹಸಕ್ಕೆ ಮುಂದಾಗಬಾರದು. ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷಾ ಅವಧಿಯನ್ನು ಪದೇಪದೆ ವಿಸ್ತರಣೆ ಮಾಡಬಾರದು. ಆದಷ್ಟು ಬೇಗ ಸರ್ಕಾರ ವರದಿ ಸ್ವೀಕರಿಸಬೇಕು. ವಿಶೇಷ ಅಧಿವೇಶನ ಕರೆದು ಜುಲೈ 10ರೊಳಗೆ ಒಳ ಮೀಸಲಾತಿ ಅನುಷ್ಠಾನ ಮಾಡಬೇಕು. ಬಳಿಕ ಕೂಡಲೇ ಉದ್ಯೋಗದ ನಿರೀಕ್ಷೆಯಲ್ಲಿರುವ ನಾಡಿನ ಎಲ್ಲ ವರ್ಗದ ವಿದ್ಯಾರ್ಥಿ, ನಿರುದ್ಯೋಗಿ ಯುವಜನರ ಹಿತಾಸಕ್ತಿಗಾಗಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು” ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ಬಾಲಕರ ವಸತಿ ನಿಲಯದಲ್ಲಿ ಆಹಾರ ದಾಸ್ತಾನು ಕೊರತೆ; ಉಪವಾಸ ಸೊರಗಿದ ವಿದ್ಯಾರ್ಥಿಗಳು
ನಗರದ ಗಾಂಧಿ ಚೌಕದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ಸರ್ಕಲ್ ತಲುಪಿ, ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿದ್ದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳ ಕಚೇರಿ ಪ್ರತಿನಿಧಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೆಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮುಖಂಡರಾದ ಅಕ್ಷಯ ಕುಮಾರ ಅಜಮನಿ, ಮಹಾದೇವ ಚಲವಾದಿ, ಸಂದೇಶ್, ದಾವೂದ್ ನಾಯ್ಕೋಡಿ, ಯಾಸೀನ ಇನಾಮದಾರ, ಪ್ರಶಾಂತ ದಾಂಡೇಕರ್, ಪ್ರತಾಪ್, ಭೀಮರಾಯ, ಪ್ರಜ್ವಲ್, ಪ್ರವೀಣ್, ಯಮನಪ್ಪ ಮಾದರ, ಮಹಾಂತೇಶ ಅಲ್ಲದೇ ನೂರಾರು ವಿದ್ಯಾರ್ಥಿ ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.