ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಆಶಯದಂತೆ ಆತನ ಪಾಲು ದೊರೆಯಬೇಕು ಎಂಬ ಸಾಮಾಜಿಕ ನ್ಯಾಯದ ತತ್ವಕ್ಕೆ ಒತ್ತು ನೀಡಿ ನ್ಯಾ.ನಾಗಮೋಹನ್ ದಾಸ್ ಅವರು ಒಳಮೀಸಲಾತಿ ಕುರಿತಂತೆ ನೀಡಿರುವ ಶಿಫಾರಸ್ಸುಗಳನ್ನು ಸ್ವಾಗತಿಸುತ್ತಾ,ಆಗಸ್ಟ್ 11 ರಿಂದ ಆರಂಭವಾಗುವ ಅಧಿವೇಶದಲ್ಲಿ ವರದಿಯನ್ನು ಮಂಡಿಸಿ,ಯಥವಾತ್ತಾಗಿ ಜಾರಿಗೆ ತರಬೇಕು ಎಂದು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ನಿರ್ಣಯ ಕೈಗೊಂಡಿದೆ.
ನಗರದ ಟೌನ್‌ಹಾಲ್ ಬಳಿ ಇರುವ ಮುರುಘಾ ರಾಜೇಂದ್ರ ಸಭಾಂಗಣದಲ್ಲಿ ನಡೆದ ಒಳಮೀಸಲಾತಿ ಹೋರಾಟ ಸಮಿತಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ನಡೆದ ಒಳಮೀಸಲಾತಿ ಕುರಿತ ಸುಧೀರ್ಘ ಹೋರಾಟವನ್ನು ನೆನಪು ಮಾಡಿಕೊಳ್ಳುತ್ತಾ, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಒಳಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ, ಮಾದಿಗ ಸಮುದಾಯದ ಮೂವತ್ತು ಹೋರಾಟಕ್ಕೆ ಕೊನೆಗೂ ನ್ಯಾಯ ದೊರೆಯಲಿದೆ ಎಂಬ ವಿಶ್ವಾಸ ಮೂಡಿದೆ.ನ್ಯಾ ನಾಗಮೋಹನ್ ದಾಸ್ ಸಮಿತಿಯ ವರದಿಯ ಅಂಕಿ ಅಂಶಗಳ ಕುರಿತು ನಡೆಯುತ್ತಿರುವ ಚರ್ಚೆಯ ಪ್ರಕಾರವೇ ಮಾದಿಗ ಸಮುದಾಯಕ್ಕೆ ಶೇ7 ಮೀಸಲಾತಿ ಲಭಿಸಬೇಕಿತ್ತು.ಆದರೆ ಅಲೆಮಾರಿ ಸಮುದಾಯಗಳಿಗೆ, ಹಿಂದುಳಿದ ಸಮುದಾಯಗಳಿಗೆ ತಲಾ ಶೇ 1 ಮೀಸಲಾತಿ ನೀಡಿರುವುದು ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸಿದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ,ಈಗ ನೀಡಿರುವ ಮೀಸಲಾತಿ ಪ್ರಮಾಣವನ್ನು ಒಪ್ಪಿಕೊಂಡಿದ್ದು,ಇನ್ನೂ ಮೀನಾಮೇಷ ಎಣಿಸದೆ, ಆಗಸ್ಟ್ 11 ರಿಂದ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ, ಜಾರಿಗೆ ತರಬೇಕೆಂದು ಆಗ್ರಹಿಸುತ್ತೇವೆ. ಒಂದು ವೇಳೆ ಸರಕಾರ ಹಿಂದೇಟು ಹಾಕಿ ವಿಳಂಭ ಮಾಡಿದರೆ, ಆಗಸ್ಟ್ 16 ರಿಂದ ಉಗ್ರ ಹೋರಾಟಕ್ಕೆ ಅಣಿಯಾಗುವುದಾಗಿ ತಿಳಿಸಿದರು.
ಸಭೆಯಲ್ಲಿ ಹಿರಿಯ ಚಿಂತಕರಾದ ಕೆ.ದೊರೆರಾಜು,ಹಂಪಣ್ಣ ವಾಲಿಕಾರ್, ಬಸವರಾಜ ಕೌತಾರ್,ಎಂ.ಆರ್.ಹೆಚ್.ಎಸ್‌ನ ಕೇಶವಮೂರ್ತಿ, ಕುಂದೂರು ತಿಮ್ಮಯ್ಯ, ರಾಜಸಿಂಹ, ನರಸಿಂಹಮೂರ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.