ಜಗತ್ತಿನೆಲ್ಲೆಡೆ ಬಂಡವಾಳಶಾಹಿ ಪರ ಸರ್ಕಾರಗಳು ಜನಸಾಮಾನ್ಯರ, ಕಾರ್ಮಿಕರ ಬೇಡಿಕೆಗಳನ್ನು ಕಡೆಗಣಿಸಿ ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸುತ್ತಿರುವುದು ಆಘಾತಕಾರಿಯಾಗಿದೆ. ವಿಶ್ವಶಾಂತಿಯು ಗಂಭೀರ ಅಪಾಯದಲ್ಲಿದೆ. ಮತ್ತೊಂದೆಡೆ ಜಾಗತಿಕವಾಗಿ ಎಲ್ಲಾ ದೇಶಗಳಲ್ಲೂ ಬೆಲೆ ಏರಿಕೆ, ಹಣದುಬ್ಬರ ತೀವ್ರವಾಗಿ ಹೆಚ್ಚಿತ್ತಿದೆ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಕಳವಳ ವ್ಯಕ್ತಪಡಿಸಿದರು.
ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ ಕರೆಯ ಮೇರೆಗೆ ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಯ ಧಾರವಾಡ ಜಿಲ್ಲಾ ಸಮಿತಿಯಿಂದ ನಗರದ ಸಿಬಿಟಿಯಲ್ಲಿ ವಿಶ್ವ ಶಾಂತಿಗಾಗಿ ಆಗ್ರಹಿಸಿ ಅಂತರಾಷ್ಟ್ರೀಯ ಸಂಘರ್ಷ ದಿನ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಸೆಪ್ಟೆಂಬರ್ 1, 1939 ವಿಶ್ವಯುದ್ಧ-2 ಪ್ರಾರಂಭವಾದ ಕರಾಳ ದಿನ. ಇದೇ ದಿನ ನಾಜಿ ಜರ್ಮನಿಯು ಪೋಲೆಂಡ್ ದೇಶದ ಮೇಲೆ ದಾಳಿ ನಡೆಸಿದ ಬಳಿಕ ಮಹಾಯುದ್ಧ ಪ್ರಾರಂಭವಾಗಿದ್ದು.ಈ ಮಹಾಯುದ್ಧದಲ್ಲಿ ಸಾಮ್ರಾಜ್ಯಶಾಹಿ,ಫ್ಯಾಸಿಸ್ಟ್-ನಾಜಿಗಳ ಯುದ್ಧದಾಹಕ್ಕೆ, ಲಕ್ಷಾಂತರ ಮುಗ್ಧ ಜನ,ದುಡಿಯುವ ಜನತೆ ಬಲಿಯಾಗಬೇಕಾಯಿತು.ಈ ಕರಾಳ ಘಟನೆಯ ನೆನಪಿನಲ್ಲಿ ಇಂದು ಡಬ್ಲುಎಫ್‌ಟಿಯು ಅಂತರರಾಷ್ಟ್ರಿಯ ಸಂಘರ್ಷ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲು ಕರೆ ನೀಡಿದೆ. ಇಂದು ಅಮೇರಿಕದಂತಹ ವಿವಿಧ ಲಾಭ ಪಿಪಾಸು ಸಾಮ್ರಾಜ್ಯಶಾಹಿ-ಬಂಡವಾಳಶಾಹಿ ದೇಶಗಳ ಮಧ್ಯೆ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಘರ್ಷಣೆಗಳು ತೀವ್ರವಾಗಿ ಹೆಚ್ಚುತ್ತಿವೆ. ವಿವಿಧ ದೇಶಗಳ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಿ, ಲಾಭಕ್ಕಾಗಿ ಅಲ್ಲಿಯ ಜನಗಳನ್ನು ಕೊಳ್ಳೆಹೊಡೆಯಲು,ಶೋಷಣೆಗೀಡು ಮಾಡಲು ಹುನ್ನಾರ ಮಾಡುತ್ತಿವೆ. ಇವೆಲ್ಲದರ ಪರಿಣಾಮವಾಗಿ ಯುದ್ದೋನ್ಮಾದಗಳು ಹೆಚ್ಚುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಆದರೆ ಜನಸಂಖ್ಯೆಯ ಶೇ.99ರಷ್ಟಿರುವ ಜನಸಾಮಾನ್ಯರಿಗೆ- ದುಡಿಯುವ ವರ್ಗಕ್ಕೆ ಬೇಕಾಗಿರುವುದು ಆರೋಗ್ಯ, ಶಿಕ್ಷಣ, ಉದ್ಯೋಗ, ಶೋಷಣೆರಹಿತ, ಶಾಂತಿಯುತ, ನೆಮ್ಮದಿಯ ಬದುಕು. ಇದಕ್ಕಾಗಿ ಎಲ್ಲ ದುಡಿಯುವ ಜನತೆ ಒಂದಾಗಿ ಹೋರಾಟಕ್ಕಿಳಿಯುವುದೊಂದೇ ದಾರಿ. ಆದ್ದರಿಂದ ವಿವಿಧ ದೇಶಗಳ ಮಧ್ಯೆ ಸಾಮ್ರಾಜ್ಯಶಾಹಿ ಯುದ್ಧಗಳು ಮತ್ತು ಅವುಗಳ ಹುನ್ನಾರವನ್ನು ಬಯಲಿಗೆಳೆದು ವಿಶ್ವದಾದ್ಯಂತ ಶೋಷಿತ ಜನಸಾಮಾನ್ಯರ ಪರ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆಗಳಿಗೆ ಹೆಚ್ಚಿನ ಅನುದಾನ ನೀಡಿ, ಶಸ್ತ್ರಾಸ್ತ್ರಗಳ-ನಾಟೋ ಹಾಗೂ ಸಾಮ್ರಾಜ್ಯಶಾಹಿ ಹಸ್ತಕ್ಷೇಪಗಳನ್ನು ಕೈಬಿಡಬೇಕೆಂದು” ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಸಮಿತಿ ಸದಸ್ಯ ರಿಯಾಜ್ ತಡಕೋಡ, ಮುಕ್ತುಮ್ ಶಾಪುರ, ಹನುಮಂತ ಹಾವೇರಿಪೇಟ್,ಅಬ್ದುಲ್ ಅಜೀಜ್ ದರೋಗಾ ಮುಂತಾದವರು ಇದ್ದರು.