ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಫೆಬ್ರವರಿ 15ರಿಂದ ನಡೆಯುವ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವವರು ತಮ್ಮ ಸ್ವ-ವಿವರ ಸಹಿತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಸಾಹಿತ್ಯ ಲೋಕಕ್ಕೆ ಸಲ್ಲದ ಇಂತಹ ಹೇಳಿಕೆಯನ್ನು ಪ್ರಜ್ಞಾವಂತ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ ವಿಶ್ರಾಂತ ಪ್ರಾಧ್ಯಾಪಕ ಚಂದ್ರಗೌಡ ಕುಲಕರ್ಣಿ ಕರೆ ನೀಡಿದರು.
ಈ ಕುರಿತು ಪತ್ರಿಕಾ ಪ್ರಕಟಣೆಗೆ ತಿಳಿಸಿರುವ ಅವರು, “ಒಂದು ತಾಲೂಕಿನಲ್ಲಿ ಸಾಹಿತ್ಯಿಕ ಸಾಧನೆ ಮಾಡಿದ ಎಂಟರಿಂದ ಹತ್ತು ಮಂದಿ ಸಾಹಿತಿಗಳನ್ನು ಗುರುತಿಸಿ ಸೂಕ್ತವಾದವರನ್ನು ಆಯ್ಕೆ ಮಾಡುವುದು ಕರ್ನಾಟಕ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜವಾಬ್ದಾರಿ. ಜಿಲ್ಲಾ ಅಧ್ಯಕ್ಷರೂ ಕೂಡಾ ಈ ಆಯ್ಕೆಯ ಜವಾಬ್ದಾರಿಯುತ ವ್ಯಕ್ತಿಗಳಾಗಿರುತ್ತಾರೆ” ಎಂದರು.
“ಸಾಹಿತ್ಯ ಸೇವೆಯ ಘನ ಉದ್ದೇಶದಿಂದ ಹುಟ್ಟಿದ ಈ ಸಂಸ್ಥೆ ಈವರೆಗೆ ನಡೆದುಬಂದ ಅರ್ಥವತ್ತಾತ್ ಪರಂಪರೆಯನ್ನು ಮುಂದುವರೆಸಬೇಕು. ತಾಲೂಕಿನ ಅಧ್ಯಕ್ಷರಾದಿಯಾಗಿ ಎಲ್ಲ ಪದಾಧಿಕಾರಿಗಳು ಜವಾಬ್ದಾರಿ ಹೊತ್ತು ಮುನ್ನಡೆಸಬೇಕು. ಆ ಪರಂಪರೆಯನ್ನು ಮುರಿದು ಅಧ್ಯಕ್ಷರಾಗಲು ಅರ್ಜಿ ಸಲ್ಲಿಸಲು ಸೂಚಿಸಿದರೆ, ಕೋರಿದರೆ ಗೌರವಯುತ ಸಾಹಿತಿಗಳಾರೂ ಸ್ಪಂದಿಸಲಾರರು” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ತಾಲೂಕು, ಜಿಲ್ಲೆ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಆ ಸಾಹಿತಿಗೆ ಗೊತ್ತಾಗದ ರೀತಿಯಲ್ಲಿ ನಡೆಯಬೇಕೇ ಹೊರತು ಅವರಿಂದ ಅರ್ಜಿ ಪಡೆದು ನಡೆಯುವಂಥದ್ದಲ್ಲ. ಈ ಹಿಂದೆ ಮುದ್ದೇಬಿಹಾಳ ತಾಲೂಕು ಸಮ್ಮೇಳನಗಳು ನಾಲ್ಕು ನಡೆದಿವೆ. ಆಗ ಯಾರಿಂದಲೂ ಅರ್ಜಿ ಕರೆದಿರಲಿಲ್ಲ. ಪರಿಷತ್ತಿನ ಪದಾಧಿಕಾರಿಗಳು, ತಾಲೂಕಿನ ಹಿರಿಯರು, ಸ್ಥಳೀಯ ಪಕ್ಷಾತೀತವಾದ ರಾಜಕಾರಣಿಗಳು ಒಮ್ಮತದಿಂದ ಆರಿಸಿ, ಆಯ್ಕೆಯಾದ ಸಾಹಿತಿಯವರನ್ನು ಮನೆವರೆಗೆ ಹೋಗಿ ಅಹ್ವಾನ ನೀಡಿದ ಉದಾಹರಣೆಗಳು ಇದೇ ತಾಲೂಕಿನಲ್ಲಿವೆ. ಈಗ ತಾಲೂಕಿನ ಐದನೆಯ ಸಮ್ಮೇಳನಕ್ಕೆ ಅರ್ಜಿ ಹಾಕುವ ಪ್ರಸಂಗ ಬಂದಿದೆಯೆಂದರೆ ಇದರಂತಹ ಅವಮಾನದ ಕೆಲಸ ಮತ್ತೊಂದಿಲ್ಲ. ದಯವಿಟ್ಟು ತಾಲೂಕು ಮತ್ತು ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಶಾಸಕರು, ಸಂಸ್ಕೃತಿ ಪ್ರೇಮಿಗಳು ಕೆಟ್ಟ ಪರಂಪರೆಗೆ ಅವಕಾಶ ಕೊಡದೆ ಮೊದಲಿನ ಪರಂಪರೆಯನ್ನು ಮುಂದುವರೆಸಬೇಕು” ಎಂದು ಪ್ರಗತಿಪರ ಚಿಂತಕ ಅಬ್ದುಲ್ ರೆಹಮಾನ್ ಬಿದರಕುಂದಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಘಟಪ್ರಭಾ ನದಿಯಲ್ಲಿ ಅಕ್ರಮ ಮರಳುಗಾರಿಕೆ; ಸೂಕ್ತ ಕ್ರಮಕ್ಕೆ ರೈತ ಸಂಘ ಮನವಿ
“ಮುದ್ದೇಬಿಹಾಳ ಕಸಾಪ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನ, ನಾಲ್ಕು ತಾಲೂಕು ಸಮ್ಮೇಳನ ನಡೆಸಿದ ಒಳ್ಳೆಯ ಹೆಸರನ್ನು ಪಡೆದಿದೆ. ಇದನ್ನು ಅರ್ಥಮಾಡಿಕೊಂಡು ಈಗ ತಾಲೂಕು ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವುದು ಸೂಕ್ತ. ಸಾಹಿತ್ಯಾಭಿಮಾನಿಗಳು ಸೂಕ್ತ ಈತಿಯಲ್ಲಿ ಆಯ್ಕೆಯಾಗುವಂತೆ ಪದಾಧಿಕಾರಿಗಳ ಮೇಲೆ ಒತ್ತಡ ಹೇರಬೇಕು” ಎಂದು ಆಗ್ರಹಿಸಿದರು.