ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಬಂದಿದ್ದ ಕ್ರೀಡಾಪಟುಗಳು ಆಯೋಜಕರ ಬೇಜವಬ್ದಾರಿತನದಿಂದಾಗಿ ಬೇಸತ್ತಿದ್ದಾರೆ. ಅಗತ್ಯ ಮೂಲ ಸೌಲಭ್ಯಗಳು ದೊರೆಯದೆ, ರಸ್ತೆ ಬದಿಯಲ್ಲಿ ಕಾದು ಕುಳಿತು ಕ್ರೀಡೆಯೇ ಬೇಡಪ್ಪಾ ಎಂಬ ಪರಿಸ್ಥಿತಿ ಅನುಭವಿಸಿದ್ದಾರೆ.
ಗದಗ ನಗರದಲ್ಲಿ ಶನಿವಾರದಿಂದ ಪಿಯುಸಿ ಕಾಲೇಜುಗಳ ರಾಜ್ಯ ಪಟ್ಟದ ಹಾಕಿ ಕ್ರೀಡಾಕೂಟ ನಡೆಯಲಿದೆ. ಅದಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ನಗರಕ್ಕೆ ಬಂದಿದ್ದಾರೆ. ಆದರೆ, ಬರುವ ವಿದ್ಯಾರ್ಥಿಗಳಿಗೆ ಸರಿಯಾದ ವ್ಯವಸ್ಥೆ ಒದಗಿಸುವಲ್ಲಿ ಆಯೋಜಕು ವಿಫಲರಾಗಿದ್ದು, ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಗದಗ ವಿಭಾಗವು ಕ್ರೀಡಾಪಟುಗಳಿಗೆ ಅಗತ್ಯ ವ್ಯವಸ್ಥೆ ಒದಗಿಸುವ ಜವಾಬ್ದಾರಿ ಹೊತ್ತಿತ್ತು. ಆದರೆ, ಬರುವ ವಿದ್ಯಾರ್ಥಿಗಳಿಗೆ ವಸತಿ, ಉಪಹಾರ, ಊಟ, ನೀರು, ವಾಹನ ಪ್ರಮುಖ ಸೌಲಭ್ಯಗಳನ್ನು ಒದಗಿಸಬೇಕಿತ್ತು. ಆದರೆ, ಯಾವ ಸೌಲಭ್ಯಗಳು ವ್ಯವಸ್ಥಿತವಾಗಿ ದೊರೆಯದ ಕಾರಣ, ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಳಗಿನ ಜಾವವೇ ಗದಗಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ರಾತ್ರಿ ಇಡೀ ಪ್ರಯಾಣ ಮಾಡಿಕೊಂಡು ಬಂದ ವಿದ್ಯಾರ್ಥಿಗಳಿಗೆ ಎಲ್ಲಿಗೆ ಹೋಗಬೇಕು. ಎಲ್ಲಿ ಉಳಿಯಬೇಕು ಎಂಬುದರ ಮಾಹಿತಿಯೂ, ಸೌಲಭ್ಯವೂ ದೊರೆಯದೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಕ್ರೀಡಾಂಗಣಗಳಲ್ಲಿಯೇ ಕಾದು ಕುಳಿತಿದ್ದರು.
ತಡವಾಗಿ ಕೊಠಡಿಗಳನ್ನು ನೀಡಿದರೂ, ಅವುಗಳು ಶುಚಿಯಾಗಿಲ್ಲ. ಗಬ್ಬುನಾರುತ್ತಿವೆ. ಕುಡಿಯುವ ನೀರು, ಊಟದ ವ್ಯವಸ್ಥೆ ಕೂಡ ಸರಿಯಾಗಿ ಆಗಿರಲಿಲ್ಲ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.