ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್ ” ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳ ರೈತರ ಭೂಮಿಯನ್ನು ಕೈಗಾರಿಕೆ ಅಭಿವೃದ್ಧಿಗಾಗಿ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿ, ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿ, ಅಧಿಕಾರಕ್ಕೆ ಬಂದರೆ ಇದಕ್ಕೆಲ್ಲ ಅವಕಾಶ ಕೊಡುವುದಿಲ್ಲ ಎಂದಿದ್ದರು. ಈಗ, ಅಧಿಕಾರದಲ್ಲಿರುವಾಗ ಎಲ್ಲಾ ವಿಚಾರ, ಮಾಹಿತಿ ತಿಳಿದಿದ್ದರೂ ಸಹ ಸರ್ಕಾರ ರೈತರಿಗೆ ದ್ರೋಹ ಎಸಗುತ್ತಿದೆ. ಜನ ಚಳುವಳಿಯಲ್ಲಿ ಭಾಗಿಯಾದ ಸಿದ್ದರಾಮಯ್ಯ ಇವರೇನಾ? ” ಎಂದು ಪ್ರಶ್ನಿಸಿದರು.
ಮೂರು ಪಕ್ಷದಲ್ಲಿರುವವರು ಕಳ್ಳರೇನ? ಅದಕ್ಕೆ, ಸುಮ್ಮನೆ ಇದ್ದೀರಾ? ಈ ಹಿಂದೆಯೆಲ್ಲ ಮಾತು ಕೊಟ್ಟಿದ್ದೀರಿ, ಅದನ್ನೆಲ್ಲಾ ಕೇಳಿಸಿಕೊಂಡಿದ್ದೇವೆ. ನಾನು ಚಳುವಳಿಗಾರ ಅಲ್ಲಾ, ರೈತನಲ್ಲ. ಆದರೆ, ಬದ್ಧತೆ ಇರುವ ನಾಗರೀಕ. ರೈತರಿಗೆ ಅನ್ಯಾಯವಾಗುತ್ತಿರುವ ಸಂದರ್ಭದಲ್ಲಿ ಅವರೊಟ್ಟಿಗೆ ನಿಲ್ಲಬೇಕಾದದ್ದು ನಮ್ಮೆಲ್ಲರ ಕರ್ತವ್ಯ.
” ಸರ್ಕಾರ ರೈತರ ಒಗ್ಗಟ್ಟನ್ನು ಒಡೆಯಲು, ಹಾಗೆಯೇ, ಹೆದರಿಸಲು ನಾಟಕವಾಡುತ್ತಿದೆ. ಮನೆ ಕಟ್ಟುವಂತಿಲ್ಲ, ಭೂಮಿ ಮಾರುವಂತಿಲ್ಲ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಭಯದ ವಾತಾವರಣ ನಿರ್ಮಿಸಲು ಹೊರಟಿದ್ದಾರೆ. ಇದೇ, ವಿಚಾರವಾಗಿ ದೆಹಲಿಯ ಸಭೆಗೆ ತೆರಳಿದಾಗ ಇಲಾಖೆ ಮಟ್ಟದ ಅಧಿಕಾರಿಗಳು, ತಜ್ಞರು ಇರುವ, ಜೊತೆಗೆ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್. ಡಿ. ದೇವೇಗೌಡ ಅವರು ಭಾಗಿಯಾಗಿದ್ದ ಸಭೆಗೆ ಒಪ್ಪಿಗೆ ಪಡೆದು ಹೋದಾಗ ಬಿಜೆಪಿ ಸಂಸದರು ಅಲ್ಲಿಂದ ಕಾಲು ಕಿತ್ತರು. ಯಾಕೆ? ಹೀಗೆ ಓಡುತ್ತಾ ಇದ್ದೀರಾ ಅಂತ ಕೇಳಿದರೆ ಮೇಧಾ ಪಾಟ್ಕರ್ ಹಾಗೂ ನೀವು ಬಂದಿರುವುದಕ್ಕೆ ಸಭೆಯಲ್ಲಿ ಭಾಗಿಯಾಗುವುದಿಲ್ಲ. ಕಡೆಗೆ ಸಭೆಯನ್ನೇ ನಡೆಸುವುದಿಲ್ಲ.”
” ಸಿದ್ದರಾಮಯ್ಯ, ಎಂ. ಬಿ. ಪಾಟೀಲ್ ರೇ, ನಿಮ್ಮಗಳ ನಾಟಕ ರಾಜ್ಯಕ್ಕೆ ತಿಳಿಯುತ್ತಿದೆ. ಜನಗಳಿಗೂ ಹಂತ ಹಂತವಾಗಿ ತಿಳಿಯುತ್ತಿದೆ. ನನ್ನ ಮುಂದೆ ನಿಮ್ಮ ನಾಟಕ ನಡೆಯುವುದಿಲ್ಲ, ನನಗೆ ನಿಮ್ಮ ನಾಟಕ ಬೇಗ ತಿಳಿಯುತ್ತದೆ. ಯಾಕಂದ್ರೆ ನಾನೊಬ್ಬ ನಟ.
ಅನಾವಶ್ಯಕವಾಗಿ ರೈತರಲ್ಲಿ ಭಯ ಹುಟ್ಟಿಸುವುದನ್ನು ಬಿಡಿ. ಯಾವುದೇ ಕಾರಣಕ್ಕೂ ಭೂಮಿ ಕಸಿದುಕೊಳ್ಳಲು ಸಾಧ್ಯವೇ ಇಲ್ಲ. ಹೋರಾಟ ಮುಂದಿನ ದಿನಗಳಲ್ಲಿ ಬೇರೆಯದೇ ರೂಪ ಪಡೆದುಕೊಳ್ಳುತ್ತದೆ. ಮೂರು ವರ್ಷಗಳಿಂದ ಚನ್ನರಾಯಪಟ್ಟಣ ಹೋಬಳಿಯಿಂದ ಪ್ರಾರಂಭವಾಗಿ, ದೇವನಹಳ್ಳಿ ತಾಲ್ಲೂಕಿಗೆ ವ್ಯಾಪಿಸಿ, ಬೆಂಗಳೂರಿನಿಂದ ಹಿಡಿದು, ರಾಜ್ಯ, ರಾಷ್ಟ್ರ ಮಟ್ಟದವರೆಗೆ ಗಮನ ಸೆಳೆದಿದೆ. ರೈತರ ಭೂಮಿ ಕಬಳಿಸಿ. ವ್ಯವಸಾಯವೇ ಇಲ್ಲದಂತೆ ಆದರೆ ಹೊಟ್ಟೆಗೆ ಏನು ತಿಂತೀರಾ?. ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯೇ ಬೇಕಾ? ” ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದಲ್ಲಿರುವಾಗ ಇದು ಚಿಕ್ಕ ಗಾಯ ವಾಸಿ ಮಾಡುವುದಾಗಿ ಹೇಳಿದ್ದೀರಿ. ಈಗ ಅಧಿಕಾರದಲ್ಲಿರುವಾಗ ಅದೇ ಗಾಯವನ್ನು ರಣ ಮಾಡುತ್ತಿರುವುದು ಸರಿಯಾ?. ನಿಮಗೆ ಆತ್ಮಸಾಕ್ಷಿ ಇದಿಯಾ. ರೈತರು, ಸಂಘಟನೆಗಳೇ ತಂದ ಈ ಸರ್ಕಾರಕ್ಕೆ ಎರಡು ವರ್ಷ ತುಂಬಿದೆ. ನಿಮಗೆ ಎಲ್ಲವೂ ತಿಳಿದಿದ್ದರೂ, ನೀವೇ ಹೋರಾಟದಲ್ಲಿ ಭಾಗಿಯಾಗಿ ಬೆಂಬಲಿಸಿದ್ದರೂ ಏನು ಗೊತ್ತಿರದ ಹಾಗೆ ಫೈನಲ್ ನೋಟಿಫಿಕೇಶನ್ ಆಗಲು ಯಾಕೆ ಬಿಟ್ಟಿರಿ ಎಂದರು.
ಫ್ರೀಡಂ ಪಾರ್ಕಿನಲ್ಲಿ ನಡೆದ ಸಮಾವೇಶದ ಸಮಯದಲ್ಲಿ ವಿಧಾನಸೌಧಕ್ಕೆ ನಿಯೋಗ ಕರೆಸಿ ಹದಿನೈದು ದಿನಗಳ ಗಡುವು ಕೋರಿ, ಅಲ್ಲಿಯ ತನಕ ಏನನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿ. ಈಗ ಏನು ಮಾಡುತ್ತಾ ಇದ್ದೀರಿ?. ಹಸಿರು ವಲಯವಾಗಿರುವ 1500 ಎಕರೆ ಭೂಮಿಯಲ್ಲಿ ಭೂ ರಹಿತರಿದ್ದಾರೆ. ಅವರಿಗೆ ಏನು ಪರಿಹಾರ? ಎಂದು ಕೇಳಿದರೆ ಸಚಿವರೊಬ್ಬರು ಹಾಗೆ ಬಿಟ್ಟರೆ ಸ್ಲಂ ಆಗುತ್ತದೆ ಎನ್ನುತ್ತಾರೆ. ಇದೆಲ್ಲವೂ ಸರಿಯಾ ನಿಮಗೆ ಎಂದು ಕೇಳಿದರು. ದೇವನಹಳ್ಳಿಯ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ, ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಹೇಳಿದರು.
ಸಂಯುಕ್ತ ಹೋರಾಟ ಕರ್ನಾಟಕ ಸಂಯೋಜಕರಾದ ಬಡಗಲಪುರ ನಾಗೇಂದ್ರ ಮಾತನಾಡಿ ” ಅಧಿಕಾರಕ್ಕೆ ಬರುವ ಮುನ್ನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಹೋರಾಟದಲ್ಲಿ ಭಾಗಿಯಾಗಿ, ಬೆಂಬಲ ಸೂಚಿಸಿ, ಅಧಿಕಾರಕ್ಕೆ ಬಂದರೆ ಭೂ ಸ್ವಾಧೀನ ತಡೆಯುವ ಭರವಸೆ ನೀಡಿದ್ದರು. ಆದರೆ, ಈಗ ಅಧಿಕಾರದಲ್ಲಿರುವ ಸರ್ಕಾರವೇ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಹೊರಟಿದೆ. ಜನ ಚಳುವಳಿಯ ಹಿನ್ನಲೆಯಿಂದ ಅಧಿಕಾರಕ್ಕೆ ಬಂದ ಮುಖ್ಯ ಮಂತ್ರಿಗಳು. ಇದೇ ರೀತಿ ಮುಂದುವರೆದರೆ ರಾಜಕೀಯ ಜೀವನ ಕೊನೆಗೊಳ್ಳುವ ಸಾಧ್ಯತೆಯೇ ಹೆಚ್ಚು. ರೈತರ, ಜನ ಚಳುವಳಿಯ ಆಕ್ರೋಶ ಎದುರಿಸಬೇಕಾಗುತ್ತದೆ ” ಎಂದರು.
ರೈತ ನಾಯಕಿ ಚುಕ್ಕಿ ನಂಜುಂಡ ಸ್ವಾಮಿ ಮಾತನಾಡಿ ” ಕರ್ನಾಟಕ ಅಭಿವೃದ್ಧಿಯ ಮಾದರಿ. ದುಡಿಯೋ ಜನರ ಒಳಗೊಂಡ ಅಭಿವೃದ್ಧಿ ಎನ್ನುವ ಮಾತು. ಇನ್ನೊಂದು ಕಡೆ ನುಡಿದಂತೆ ನಡೆಯುವ ಸರ್ಕಾರ ಎಂದು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರ ಬಂದೇ ಎರಡು ವರ್ಷ ಆಯ್ತು. ಪ್ರಾಥಮಿಕ ಅಧಿಸೂಚನೆ ಆಗಿದ್ದ ಸಮಯ, ಫೈನಲ್ ನೋಟಿಫಿಕೇಶನ್ ಆಗಿರಲಿಲ್ಲ. ತಡೆಯಬಹುದಾದ ಎಲ್ಲಾ ಸಾಧ್ಯತೆಗಳು ಇದ್ದವು. ಆದರೆ, ಆ ಕೆಲಸ ಮಾಡಲಿಲ್ಲ. ಈಗ, ಹೋರಾಟದ ಸಂದರ್ಭದಲ್ಲಿ
ಕಾನೂನಿನ ತೊಡಕು ನಿವಾರಣೆಗೆ ಹದಿನೈದು ದಿನಗಳ ಗಡುವು ಕೋರಿದ್ದೀರೋ, ಇಲ್ಲ ನಿಮ್ಮ ಕಾರ್ಯ ಸಾಧನೆಗೆ ದಾರಿ ಮಾಡಿಕೊಂಡಿದ್ದಿರೋ.”
” ಅರಸು ಕಾಲದಲ್ಲಿ ರೈತರಿಗೆ, ದಲಿತರಿಗೆ ನೀಡಿದ್ದ ಭೂಮಿಯನ್ನು ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಕಸಿಯುವುದು ಕರ್ನಾಟಕ ಮಾದರಿ ಸರ್ಕಾರವೇ?. ರೈತರು ಸ್ಪಷ್ಟವಾಗಿ ಭೂಮಿ ಕೊಡುವುದಿಲ್ಲ ಎಂದು ಹೇಳುತ್ತಿರುವಾಗ ಬಲವಂತವಾಗಿ ಕಿತ್ತುಕೊಳ್ಳುವ
ಹುನ್ನಾರ ಸರಿಯೇ?. ಹೋರಾಟ ಮುಂದಿನ ದಿನಗಳಲ್ಲಿ ಪ್ರಬಲಗೊಳ್ಳಲಿದೆ, ಸೋಲುವ ಮಾತೇ ಇಲ್ಲ. ಚಳುವಳಿ ಗೆಲ್ಲಿಸುವ ಭಾಧ್ಯತೆ ಸರ್ಕಾರದ ಮೇಲಿದೆ ” ಎಂದು ಹೇಳಿದರು.
ದಸಂಸ ರಾಜ್ಯ ಸಂಚಾಲಕರದ ಗುರುಪ್ರಸಾದ್ ಕೆರಗೋಡು ಮಾತನಾಡಿ ” ಜನಪರ, ಸಮಾಜವಾದಿ ಹಿನ್ನಲೆಯ ಸಿದ್ದರಾಮಯ್ಯ ಅವರೇನ ಎನ್ನುವ ಅನುಮಾನ ಕಾಡುತ್ತಿದೆ. ಹೋರಾಟಗಾರರಿಗೆ ಮುಂದಿನ ಹದಿನೈದು ದಿನಗಳ ಕಾಲಾವಕಾಶದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗುವುದಿಲ್ಲ ಎಂದು. ಈಗ, ಮಾಡುತ್ತಿರುವುದಾದರು ಏನು?. ಅರಸು ಅವರು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಾಗ ಹೋರಾಟ ಮಾಡಿದ್ವಿ. ಆಗ, ಇದೇ ಸಿದ್ದರಾಮಯ್ಯ ಸಹ ಜೊತೆಗಿದ್ದರು. ಈಗ, ನಿಮ್ಮ ಪಾಲನೆ ಏನು?. ನಿಜಕ್ಕೂ ಜನ ಚಳುವಳಿ ಭಾಗವಾಗಿ ಬಂದವರ ನೀವು!. ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಇಲ್ಲವಾದಲ್ಲಿ ಜನ ಚಳುವಳಿಗೆ ಮಾಡಿದ ದ್ರೋಹ ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ನಿಶ್ಚಿತ ಗೌರವಧನದ ಆಶ್ವಾಸನೆ; ಕೊಟ್ಟ ಮಾತು ಮರೆತ ಆಡಳಿತ ಸರ್ಕಾರ
ಪತ್ರಿಕಾಗೋಷ್ಟಿಯಲ್ಲಿ ದಸಂಸ ಮುಖಂಡರಾದ ಬೆಟ್ಟಯ್ಯ ಕೋಟೆ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾಯದರ್ಶಿ ಜಗದೀಶ್ ಸೂರ್ಯ, ರೈತ ಸಂಘದ ಕೆಂಪೂಗೌಡ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಎಐಕೆಕೆಎಂಎಸ್ ನ ಬಸವರಾಜು, ಎಐಎಆರ್ಎಲ್ಎ ಮುಖಂಡ ಚೌಡಳ್ಳಿ ಜವರಯ್ಯ ಸೇರಿದಂತೆ ಹಲವರು ಇದ್ದರು.