ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅನಿವಾರ್ಯವಾಗಿತ್ತು. ಸರ್ವಾಧಿಕಾರಿಗಳ ಆಡಳಿತದ ಅವಧಿಯಲ್ಲಿ ಪ್ರಜಾಪ್ರಭುತ್ವದ ಆಶಯಗಳು ಅಪಾಯದಲ್ಲಿರುವಾಗ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರಲು ಮಾನವ ಸರಪಳಿ ಉತ್ತಮ ಸಂದೇಶ ವಾಹಕ.
ಆದರೆ, ತುಮಕೂರಿನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ರಾಜಪ್ರಭುತ್ವವನ್ನು ನೆನಪಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ಅಂಬಾರಿ ಏರಿದ ರಾಜನಂತೆ ಕಂಡುಬಂದರು. ರಾಜನೋರ್ವ ಅಂಬಾರಿ ಮೇಲೆ ತೆರಳುತ್ತಿದ್ದರೆ ಪ್ರಜೆಗಳೆಲ್ಲರೂ ರಸ್ತೆ ಬದಿಯಲ್ಲಿ ನಿಂತು ಜಯಘೋಷಗಳನ್ನು ಕೂಗುವಂತೆ, ರಾಜನು ಅಂಬಾರಿ ಏರಿ ಬಡ ಪ್ರಜೆಗಳೆಲ್ಲರತ್ತ ಕೈಬೀಸಿ ಸಾಗುತ್ತಿದ್ದ ದೃಶ್ಯ ಇಂದಿನ ಮಾನವ ಸರಪಳಿಯಲ್ಲಿ ಮರುಕಳಿಸಿತು.
ಶಿರಾ ತಾಲೂಕಿನ ತಾವರೆಕೆಯಿಂದ ಪ್ರಾರಂಭವಾದ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರು ಸುಮಾರು 17 ಅಡಿ ಎತ್ತರದ ಅಂಬಾರಿ ಬಸ್ ಏರಿ ಕೈಬೀಸುತ್ತಿದ್ದದ್ದು ಮಾತ್ರ ಒಂದು ಕ್ಷಣ ಪ್ರಜಾಪ್ರಭುತ್ವ ದೇಶದಲ್ಲಿ ಇದೆಂತಹ ನಡವಳಿಕೆ ಎಂಬ ಗೊಂದಲಕ್ಕೀಡು ಮಾಡಿತು.
ಗೃಹ ಸಚಿವರ ಈ ನಡವಳಿಕೆಯಿಂದ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ. ಅಲ್ಲದೆ ಇದು ಸ್ವಂತ ಪ್ರಚಾರಕ್ಕೆ ಬಳಸಿಕೊಂಡಂತೆ ಭಾಸವಾಯಿತು. ಉದ್ದೇಶ ಒಳ್ಳೆಯದಾಗಿದ್ದರೂ ಅನುಷ್ಠಾನಗೊಳಿಸುವ ಪರಿ ಸ್ವೀಕಾರಾರ್ಹವಲ್ಲ. ಜನಪ್ರತಿನಿಧಿಗಳು 90 ಕಿಮೀ ನಡೆಯಲು ಸಾಧ್ಯವಿಲ್ಲ, ಸರಿ. ಜನರೊಂದಿಗೆ ಬೆರೆಯದೆ ರಾಜನಂತೆ(ಇಂದಿನ ಪ್ರಧಾನ ಮಂತ್ರಿಗಳಂತೆ) ಅಂಬಾರಿ ಏರಿ ಹೊರಟರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ಇದು ಉದ್ದೇಶಪೂರಿತ ತಪ್ಪಲ್ಲವೆಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರಿಂದ ಮಾಫಿಗೆ ಅರ್ಹವಾದದು. ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗದೆ ಕಾರ್ಯಕ್ರಮ ರೂಪಿಸಿದ ರಾಜ್ಯ ಸರ್ಕಾರದ ಗಮನದಲ್ಲಿರಬೇಕಿತ್ತು.
ಮಾನವ ಸರಪಳಿಯಲ್ಲಿ ಸರ್ಕಾರಿ ಶಾಲೆ ಮಕ್ಕಳು, ಖಾಸಗಿ ಶಾಲೆ ಮಕ್ಕಳು ಭಾಗವಹಿಸಿದ್ದರು. ಖಾಸಗಿ ಶಾಲೆ ಮಕ್ಕಳು ಸುವ್ಯವಸ್ಥಿತವಾದ ಶಾಲಾ ಬಸ್‌ನಲ್ಲಿ ಬಂದಿಳಿದರೆ, ಸರ್ಕಾರಿ ಶಾಲೆ ಮಕ್ಕಳು ಸಾಮಾನು ಸರಂಜಾಮು ಸಾಗಿಸುವ ಟಾಟಾ ಏಸಿ ವಾಹನಗಳಲ್ಲಿ ಬಂದಿಳಿದರು. ಸರ್ಕಾರಿ ಶಾಲೆ ಮಕ್ಕಳ ಜೀವಕ್ಕೆ ಬೆಲೆ ಇಲ್ಲದಿರುವುದು ಈ ಚಿತ್ರ ನಿರೂಪಿಸಿದಂತಿತ್ತು. ಟಾಟಾ ಏಸಿ ವಾಹನದಲ್ಲಿ ಸಾಗುತ್ತಿರುವ ಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲದೆ ನಿಂತಿದ್ದರು. ದುರಾದೃಷ್ಟವೆಂಬಂತೆ ಅಪಘಾತ ಸಂಭವಿಸಿದ್ದರೆ ಪರಿಸ್ಥಿತಿ ಏನಾಗಬೇಕಿತ್ತು. ದೇಶದ ಮುತ್ತು-ರತ್ನಗಳಂತಿರುವ ಮಕ್ಕಳ ಜೀವಕ್ಕೆ ಹಾನಿಯಾದರೆ ಬೆಲೆ ಕಟ್ಟಲಾದೀತೆ?. ಪೋಷಕರಿಗೆ ಉತ್ತರ ನೀಡುವವರು ಯಾರು?. ಅಧಿಕಾರಿಗಳು, ಜನಪ್ರತಿನಿಧಿಗಳ ಶೋಕಾಚರಣೆ ಪರಿಹಾರವಾದೀತೇ?. ಈ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಇಲಾಖೆ ಮೇಲೆ ಕ್ರಮ ಆಗಬೇಕಲ್ಲವೇ?.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?
ಈ ಸಣ್ಣಪುಟ್ಟದ್ದನ್ನೆಲ್ಲ ಯಾರು ಕೇಳೋಕೆ ಹೋಗ್ತಾರೆ. ಗೂಡ್ಸಲ್ಲಿ ಬರ್ತಾರೆ, ಜಟ್ಕಾದಲ್ಲಿ ಬರ್ತಾರೆ, ಎತ್ತಿನ ಗಾಡಿಯಲ್ಲಿ ಬರ್ತಾರೆ. ಹೇಗಾದರೂ ಬರಲಿ ಬಿಡಿ ಎಂದು ಗೃಹ ಸಚಿವ ಪರಮೇಶ್ವರ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವುದು ಸಹ ಬೇಜವಾಬ್ದಾರಿತನದ ಹೇಳಿಕೆಯೇ ವಿನಾಃ ಬೇರೇನಲ್ಲ.
ಒಟ್ಟಾರೆ ತುಮಕೂರಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ವೃದ್ಧರಿಂದ ಹಿಡಿದು, ಮಕ್ಕಳು, ಶ್ರಮಿಕ ವರ್ಗ, ಮಹಿಳೆಯರು ಸೇರಿದಂತೆ ಸಮಾಜದ ನಾನಾ ಸ್ತರದವರು ಭಾಗವಹಿಸಿ ಯಶಸ್ವಿಗೊಳಿಸಿದರಾದರೂ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ರಾಜಪ್ರಭುತ್ವ ಮರುಕಳಿಸಿದ್ದಂತು ಸುಳ್ಳಲ್ಲ.
(ವರದಿ: ಹರೀಶ್)
Nice reporting