ತೆರಿಗೆ ವಂಚನೆ ಹಿನ್ನೆಲೆ, ರಾಜಧಾನಿ ಬೆಂಗಳೂರಿನ 30 ಕಡೆ ಬುಧವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಗರದ ವಿಜಯನಗರ, ಬಿಟಿಎಂ ಲೇಔಟ್, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳು, ಕಂಪನಿ ಮಾಲೀಕರು, ಚಿನ್ನದ ವ್ಯಾಪಾರಿಗಳು, ಮೆಡಿಕಲ್ ಶಾಪ್‌ಗಳು, ಆಸ್ಪತ್ರೆ ಮಾಲೀಕರು ಹಾಗೂ ಉದ್ಯಮಿ ಸಂಸ್ಥೆಗಳ ಮನೆ ಮತ್ತು ಕಚೇರಿ ಸೇರಿದಂತೆ ಒಟ್ಟು 30 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ ಚರಾಸ್ತಿ ಮತ್ತು ಸ್ಥಿರಾಸ್ತಿ ವರಮಾನದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳು ರಾತ್ರೋರಾತ್ರಿ ಚೆನ್ನೈ, ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ. ಒಂದೊಂದು ತಂಡದಲ್ಲಿ 5 ರಿಂದ 6 ಮಂದಿ ಅಧಿಕಾರಿಗಳಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ವಿಜಯನಗರದಲ್ಲಿರುವ ವೈದ್ಯೆ ನಿವಾಸ, ಪ್ರಶಾಂತನಗರದಲ್ಲಿರುವ ವೈದ್ಯೆ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಮೇಕ್ರಿ ಸರ್ಕಲ್ ಬಳಿಯ ಗಜರಾಜ ಜ್ಯುವೆಲರ್ಸ್ ಮೇಲೆ ದಾಳಿ ಮಾಡಲಾಗಿದ್ದು, ಅಧಿಕಾರಿಗಳು ಅಂಗಡಿ ಬಾಗಿಲು ಮುಚ್ಚಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಜಾತಿ ಗಣತಿ ವರದಿಯ ಅನುಷ್ಠಾನ ಯಾವಾಗ? ಮುಖ್ಯಮಂತ್ರಿ ಚಂದ್ರು ಪ್ರಶ್ನೆ
ಬೆಂಗಳೂರಿನ ಶಾಂತಿನಗರದ ಉದ್ಯಮಿ ನವೀನ್ ಮನೆ ಮೇಲೂ ಐಟಿ ದಾಳಿಯಾಗಿದೆ. ಎರಡು ಇನೋವಾ ಕಾರಿನಲ್ಲಿ ಬಂದಿರುವ ಎಂಟು ಮಂದಿ ಐಟಿ ಅಧಿಕಾರಿಗಳು, ನವೀನ್ ಅವರ ಶಾಂತಿನಗರದಲ್ಲಿನ ದೊಡ್ಡ ಐಶಾರಾಮಿ ಬಂಗಲೆಯಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಶಾಂತಿನಗರದಲ್ಲಿರುವ ಉದ್ಯಮಿಯೊಬ್ಬರ ಮನೆ ಮೇಲೂ ದಾಳಿ ನಡೆದಿದೆ.
ಬೆಂಗಳೂರಿನ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಸೆ.27ರಂದು ದಾಳಿ ನಡೆಸಿತ್ತು. ಆದಾಯ ತೆರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಈ ದಾಳಿ ಬಳಿಕ ಇದೀಗ ವಾರದ ನಂತರ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆ ಬೆಂಗಳೂರಿನ ಹುಳಿಮಾವು ಸಮೀಪದ ಆಪಸ್ ಅಪಾರ್ಟ್ ಮೆಂಟ್‌ನ 14ನೇ ಮಹಡಿಯಲ್ಲಿರುವ ಉದ್ಯಮಿಯೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.