ಬಾಗಲಕೋಟೆಗೆ ಘೋಷಣೆಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹೋರಾಟ ನಿಲ್ಲುವುದಿಲ್ಲ. ಬದಾಮಿಯಲ್ಲಿ ಇಮ್ಮಡಿ ಪುಲಿಕೇಶಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಗಾಗಿ ಹಾಗೂ ಬಾಗಲಕೋಟೆ ರೈಲು ನಿಲ್ದಾಣಕ್ಕೆ ಇಮ್ಮಡಿ ಪುಲಿಕೇಶಿ ಹೆಸರಿಡುವಂತೆ ಆಗ್ರಹಿಸಿ ಹೋರಾಟ ಆರಂಭಿಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಹೇಳಿದ್ಅರೆ.
ಬಾಗಲಕೋಟೆಯಲ್ಲಿ ಕರವೇ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಮತ್ತು ಗೆಜೆಟ್ ಹೊರಡಿಸಬೇಕು, ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಹಾಗೂ ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ಸಂಪೂರ್ಣ ಶೈಕ್ಷಣಿಕ ಮೀಸಲಾತಿ ಒದಗಿಸಬೇಕು, ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳು, ಖಾಸಗಿ ಸಂಸ್ಥೆಗಳು, ಇನ್ನಿತರ ಉದ್ಯಮಗಳ ಮಾಲೀಕರುಗಳು ನವೆಂಬರ್ 15ರ ಒಳಗಾಗಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಬೇಕು, ನಾಮಫಲಕದ ಶೇ.60ರಷ್ಟು ಕನ್ನಡದಲ್ಲೇ ಇರಬೇಕು ಇಲ್ಲದಿದ್ದರೆ ಕರವೇ ಕಾರ್ಯಕರ್ತರು ನಿಮ್ಮ ನಾಮಫಲಕಗಳಿಗೆ ಮಸಿ ಬಳಿಯುತ್ತಾರೆ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್. ಜಿ. ನಂಜಯ್ಯನಮಠ, ಭಾಜಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ನಾಯ್ಕರ, ಯುವ ಮುಖಂಡ ಸಂತೋಷ್ ಹೊಕ್ರಾಣಿ, ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಆನಂದ ಜಿಗಜಿನ್ನಿ, ಕಾಂಗ್ರೆಸ್ ಮುಖಂಡರಾದ ಸಂಗಮೇಶ ದೊಡ್ಡಮನಿ, ನಂದಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಹಾಲವರ ಆಗಮಿಸಿದ್ದರು.
ಬಸವರಾಜ ಅಂಬಿಗೇರ ನಿರೂಪಣೆ ಮಾಡಿದರು. ಭಾಗ್ಯಾ ಬೆಟಗೇರಿ, ಮಲ್ಲು ಕಟ್ಟೀಮನಿ, ಸಂಗಮೇಶ ಅಂಬಿಗೇರ, ಶಿವು ಹೊಸಗೌಡರ, ರಾಹುಲ್ ಶೆಟ್ಟರ್, ಗಣೇಶ ನಾಯಕ, ಶಿವಾನಂದ ಲೆಂಕೆನ್ನವರ, ಪ್ರವೀಣ್ ವಾಲೀಕಾರ, ನಚಿಕೇತ ಬಟಕುರ್ಕಿ, ಸಾಗರ ಬಿರಾದಾರ, ಪ್ರವೀಣ್ ಇನ್ನಿತರರು ಉಪಸ್ಥಿತರಿದ್ದರು.