ರೈತರ ಬದುಕು, ಪ್ರಕೃತಿಯನ್ನು ನಶಿಸಿ ಅಭಿವೃದ್ಧಿ ಸಾಧಿಸುತ್ತೇವೆ ಎಂಬುದು ಪ್ರಗತಿಯ ವಿರೋಧಿ. ಹಳ್ಳಿಗಳನ್ನು ನಾಶ ಮಾಡಿ ಅಭಿವೃದ್ಧಿ ಸಾಧಿಸುತ್ತೇವೆ ಎನ್ನುವ ಸರ್ಕಾರಗಳ ನಡೆ ಮನುಷ್ಯತ್ವ ವಿರೋಧಿ. ಇದು ಬಂಡವಾಳಶಾಹಿಗಳಿಗೆ ಲಾಭವೇ ಹೊರತು, ರೈತರಿಗೆ ಲಾಭ ಕೊಡುವುದಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಿಸಿದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಡೆಸುತ್ತಿರುವ ‘ಭೂ ಸ್ವಾಧಿನ ವಿರೋಧಿ ಹೋರಾಟ’ ಒಂದು ಸಾವಿರ ದಿನ ತಲುಪಿದ್ದು, ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ಇಂದು ರೈತರ ಬೃಹತ್ ಸಮಾವೇಶ ನಡೆಯಿತು.
ಈ ವೇಳೆ ಮಾತನಾಡಿದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, “ನಮ್ಮ ರಾಜ್ಯದಲ್ಲಿ ಆಡಳಿತದಲ್ಲಿ ಇರುವವರೆಲ್ಲ ರೈತರೇ. ಆದರೆ ಅವರು ತಮ್ಮ ಕಣ್ಣು, ಕಿವಿ, ನೆನಪನ್ನು ಕಳೆದುಕೊಂಡಿದ್ದಾರೆ. ಕಣ್ಣು ನಾವು ಯಾವ ಬಾಲ್ಯದಲ್ಲಿ ರೈತರ ಭಾವನೆಗಳನ್ನು ಕಂಡು ಅಕ್ಷರ ಪಡೆದು ನಿವಾರಿಸಬೇಕು ಎಂದು ಬಂದೆವೋ, ಅಂತಹ ಕಣ್ಣು, ಕಿವಿ, ನೆನಪುಗಳನ್ನು ಕಳೆದುಕೊಂಡಿದ್ದೇವೆ. ವಿಧಾನಸೌಧದಲ್ಲಿ ಇರುವ ಹೆಚ್ಚಿನವರು ರೈತರೇ. ಆದರೆ, ಆತ್ಮಸಾಕ್ಷಿಯನ್ನು ಎಚ್ಚರಿಸಿಕೊಂಡು ರೈತರ ಬವಣೆಯನ್ನು ನೋಡಬೇಕು. ಆತ್ಮಸಾಕ್ಷಿಯನ್ನು ಎಚ್ಚರಿಸಿಕೊಂಡು ನಿವಾರಣೆ ಮಾಡಬೇಕು. ದೇಶದ ಪ್ರಗತಿ ಆಗಬೇಕು ಸರಿ. ಆದರೆ, ಅದು ನಾಶದಿಂದ ಅಲ್ಲ. ಸಂಸ್ಕೃತಿ, ನಾಗರಿಕತೆ, ಇತಿಹಾಸ, ಬದುಕಿನ ನಾಶದಿಂದಲ್ಲ. ಬದುಕನ್ನ ಪೂರಕಗೊಳಿಸೋಕೆ ಬೇಕಿರೋದು ಪ್ರಗತಿ” ಎಂದು ತಿಳಿಸಿದರು.

ಬೆಂಗಳೂರಿಗೆ ದೇವನಹಳ್ಳಿ ತಾಲೂಕಿನಿಂದಲೇ ಎಲ್ಲ ತರಕಾರಿ ಹೋಗುತ್ತಿದೆ. ಅಂತಹ ಬದುಕನ್ನು ನಶಿಸಿ, ಪ್ರಕೃತಿಯನ್ನು, ಹಳ್ಳಿಗಳನ್ನು ನಶಿಸಿ ಪ್ರಗತಿ ಸಾಧಿಸುತ್ತೇವೆ ಎಂಬುದು ಪ್ರಗತಿ ಹಾಗೂ ಪ್ರಕೃತಿಯ ವಿರೋಧಿ ನಡೆ. ಅದು ಬಂಡವಾಳಶಾಹಿಗಳ ಲಾಭವೇ ಹೊರತು, ರೈತರಿಗೆ ಲಾಭ ಕೊಡುವುದಿಲ್ಲ. ಇದು ಇಡೀ ದೇಶದ ರಾಜಕೀಯ ಪ್ರಜ್ಞೆಗೆ ವಿರುದ್ಧವಾದುದು. ರಾಜಕೀಯ ಪ್ರಜ್ಞೆಗೆ ತಲೆತಗ್ಗಿಸುವಂಥದ್ದು. ಇಂತಹ ಕೈಗಾರೀಕರಣ ಬೇಡ. ಬಂಜರು ಭೂಮಿ ಕಡೆ ಹೋಗಿ. ಸುತ್ತಮುತ್ತಲ ಹಳ್ಳಿಗಳನ್ನು ನಾಶ ಮಾಡುವುದು ಬೇಡ. ಇದರಿಂದ ಜನರು ಆರೋಗ್ಯ ಆಗಿರುತ್ತಾರೆ. ಇಲ್ಲಿ ಕೈಗಾರಿಕೆ ಆದರೆ ಜನರ ನಾಶ ಖಂಡಿತ. ಹಾಗಾಗಿ ಇದು ಮುಂದುವರಿಯುವುದು ಬೇಡ. 13 ಹಳ್ಳಿಗಳ ಸಂಸ್ಕೃತಿ, ಇತಿಹಾಸವನ್ನು ಪ್ರಗತಿಯ ಹೆಸರಲ್ಲಿ ನಾಶ ಮಾಡುವುದು ಸಂವಿಧಾನ ವಿರೋಧಿ ನಡೆ. ಇದಕ್ಕೆಲ್ಲ ಸ್ಪಂದಿಸುವ ಮನುಷ್ಯರಾಗಿ. ಇದು ರೈತರ ಮಕ್ಕಳಾಗಿ ನಮ್ಮ ಕರ್ತವ್ಯ ಎಂದು ಸರಕಾರಕ್ಕೆ ಎಸ್.ಜಿ. ಸಿದ್ದರಾಮಯ್ಯ ಸಲಹೆ ನೀಡಿದರು.
ಮಹಿಳಾ ನಾಯಕಿ, ರೈತ ಹೋರಾಟಗಾರ್ತಿ ಚುಕ್ಕಿ ಜಂಜುಂಡಸ್ವಾಮಿ ಮಾತನಾಡಿ, “ಇದು ಈ ನಾಡಿನ ರೈತ ಸಂಸ್ಕೃತಿಯನ್ನು ಉಳಿಸಲು ಮಾಡುತ್ತಿರುವ ಹೋರಾಟ. ಸಾವಿರ ದಿನಗಳಿಂದ ಪಟ್ಟು ಹಿಡಿದು ಹೋರಾಟವನ್ನು ಮುಂದುವರಿಸಿದ್ದಾರೆ. ಸಭೆಗಳ ನಂತರ ಸಭೆಗಳು ನಡೆಯುತ್ತಿವೆ. 1000 ದಿನಗಳು ಆದ್ರೂ ಸಹ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುತ್ತಿಲ್ಲ. ಇಲ್ಲಿ ಜಯ ಸಿಕ್ಕರೆ ರಾಜ್ಯದ ಉದ್ದಗಲಕ್ಕೂ ಚಳವಳಿ ಆರಂಭ ಆಗ್ತವೆ ಎಂಬ ಭಯ ಸರಕಾರಕ್ಕೆ ಕಾಡ್ತಿದೆ. ಹಾಗಾಗಿ ಈ ರೀತಿಯ ವರ್ತನೆ ತೋರುತ್ತಿದ್ದಾರೆ. ಎಲ್ಲವೂ ಅಭಿವೃದ್ದಿ ಹೊಂದಿರುವ ರೈತರ ಫಲವತ್ತಾದ ಭೂಮಿ. ಸಣ್ಣ ರೈತರ ಒಕ್ಕಲುತನ ಮಾಡುತ್ತಿರುವ ಭೂಮಿ. ಯಾವುದು ಬಂಜರು ಭೂಮಿಯಲ್ಲ. ಸಚಿವರು ಒಂದು ಎಕರೆ ಭೂಮಿಗೆ 10 ಸಾವಿರ ಚದರಡಿ ಭೂಮಿ ಕೊಡುವುದಾಗಿ ಹೇಳುತ್ತಿದ್ದಾರೆ.ಇದು ಎಷ್ಟು ಸರಿ ಎಂದು ಖಂಡಿಸಿದರು.
“ಇದು ಕೇವಲ ಚನ್ನರಾಯಪಟ್ಟಣದ 13 ಗ್ರಾಮಗಳ ಹೋರಾಟವಲ್ಲ. ಈ ನಾಡಿನ ರೈತರ ಸಂಸ್ಖೃತಿಯನ್ನು ಉಳಿಸುವುದಕ್ಕೆ ನಡೆಸುತ್ತಿರುವ ಸಂಘರ್ಷ. ನಮಗೆ ಯಾವ ಅಭಿವೃದ್ಧಿ ಮಾದರಿ ಬೇಕು ಎಂಬುದನ್ನು ನಮ್ಮನ್ನು ಆಳುತ್ತಿರುವ ಸರ್ಕಾರಕ್ಕೆ ಬೇಕಿಲ್ಲ. ನಾವು (ರೈತರು) ಮಾಡುತ್ತಿರುವುದು ನಿಜವಾದ ಅಭಿವೃದ್ಧಿ ಎಂದು ತೋರಿಸುವುದಕ್ಕೆ ಈ ಹೋರಾಟ” ಎಂದು ತಿಳಿಸಿದರು.
“ಬಿತ್ತನೆ ಬೀಜಕ್ಕೆ ಸಾಲಿನಲ್ಲಿ ನಿಲ್ಲುವ ರೈತರು, ಕಳಪೆ ಬೀಜ ಕೊಟ್ಟಿದ್ದಕ್ಕೆ ಹೋರಾಟ ಮಾಡಬೇಕು. ಖರೀದಿ ಕೇಂದ್ರಕ್ಕೆ, ಬೆಂಬಲ ಬೆಲೆಗೆ ಹೋರಾಟ ಮಾಡಬೇಕು. ಇದರ ಜೊತೆಗೆ ಭೂ ಸ್ವಾಧೀನ ಮಾಡುತ್ತಿದ್ದಾರೆ. ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ಇದ್ದಾರೆ. ತಾವು ಎಷ್ಟೇ ಜನಪರ ಎಂದು ಹೇಳಿಕೊಂಡರೂ ಸಾಕಷ್ಟು ಜನ ವಿರೋಧಿಯಾಗಿದ್ದಾರೆ. ಆರ್ಥಿಕ ನೀತಿ ಎಲ್ಲ ಪಕ್ಷಗಳಲ್ಲೂ ಒಂದೇ. ಎಲ್ಲ ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿವೆ. ದುಡಿಯುವ ಜನಕ್ಕೆ ನ್ಯಾಯ ಕೊಡುವ ಕೆಲಸವನ್ನು ಯಾವ ಸರ್ಕಾರವೂ ಮಾಡುತ್ತಿಲ್ಲ. ಏಕೆಂದರೆ, ಚುನಾವಣೆ ವ್ಯಾಪಾರ ಆಗಿದ್ದು, ಹೂಡಿದ ಬಂಡವಾಳವನ್ನು ವಾಪಸ್ ತೆಗೆಯುತ್ತಾರೆ. ಆಗ ಅವರು ಸಂಘಟಿತರಲ್ಲದ ಜನರ ಭೂಮಿಯನ್ನು ಹರಾಜು ಹಾಕುತ್ತಾರೆ” ಎಂದು ಕಿಡಿಕಾರಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಮೊದಲಿನಿಂದಲೂ ಕಾನೂನಾತ್ಮಕ, ನೈತಿಕ ಬೆಂಬಲವಾಗಿ ನಿಂತಿರುವ ಪೀಪಲ್ಸ್ ಜಡ್ಜ್ ಎಂದು ಹೆಸರಾಗಿರುವ ಗೋಪಾಲಗೌಡರು ಉತ್ತಮ ಬೆಂಬಲ ನೀಡಿದ್ದಾರೆ. ಸಾವಿರ ದಿನಕ್ಕೆ ಹೋರಾಟ ತಲುಪಿದೆ. ಇದನ್ನ ಸಂಭ್ರಮಿಸಬೇಕ ಅಥವಾ ದುಃಖಿಸಬೇಕಾ. ಇಂತಹ ಕುತಂತ್ರ ರಾಜಕಾರಣದ ರಾಜ್ಯದಲ್ಲಿ ನಾವಿದ್ದೇವೆ ಎಂದು ಹೇಳಿದರು.

ರೈತ ಮಹಿಳೆಯರು ಭಾಗವಹಿಸಿದರೆ ನಮ್ಮ ಹೋರಾಟಕ್ಕೆ ಜಯ ಆಗಲಿದೆ ಎಂದು ಹೇಳಿದರು. ಅದರಂತೆ ನಮ್ಮ ರೈತ ಮಹಿಳೆಯರು ಇಂದು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. 2019ರಲ್ಲಿ ಮೈತ್ರಿ ಸರಕಾರ ರೈತರ ಒಪ್ಪಿಗೆ ಬೇಡ ಮನಮೋಹನ್ ಸಿಂಗ್ ಅವರ ರೈತಪರ ಕಾನೂನಿಗೆ ಎಂದು ತಿದ್ದುಪಡಿ ತಂದರು. ಅಂತಹ ಸಿಂಗ್ ಅವರ ಕಾನೂನಿಗೆ ನಿಮ್ಮ ಉತ್ತರವೇನು ಸಿಎಂ ಅವರೇ. ರಾಜ್ಯದ ವಿವಿಧೆಡೆ ಆಗಿರುವ ಭೂ ಸ್ವಾಧೀನವನ್ನು ಕೈಬಿಟ್ಟು ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಎಂದು ಸವಾಲೆಸೆದರು.
ಸಿಎಂ ಅವರ ಮಾತನ್ನು ಕೇಳುತ್ತಿಲ್ಲ ಎಂಬುದು ಮಂತ್ರಿಗಳ ಅಹವಾಲು. ಯಾವುದೇ ಸರಕಾರ ಇರಲಿ ಅದಾನಿಗೆ, ಅಂದಾನುಗೆ ಬೆಂಬಲ ಕೊಡುತ್ತಿದ್ದಾರೆ. ಆದರೆ ಅನ್ನದಾತನಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ನಿಜಕ್ಕೂ ನೋವಿನ ಸಂಗತಿ ಎಂದರು.
ರೈತ ಮುಖಂಡ ವೀರಸಂಗಯ್ಯ ಮಾತನಾಡಿ, ಯಾರೇ ಬಂದರೂ ನಮ್ಮ ಬದುಕು ಬದಲಾಗಲ್ಲ. ರೈತರು ರಾಗಿ ಬೀಸುವುದು ತಪ್ಪಲ್ಲ. ಹಾಗಾಗಿ ನಮ್ಮ ಬದುಕಿನ ಹೋರಾಟವನ್ನು ಇಷ್ಟು ಭದ್ರವಾಗಿ ಸಾವಿರ ದಿನ ಮಾಡಿರುವುದು ಇಡೀ ರಾಜ್ಯದ ಜನತೆ ಮೆಚ್ಚುವ ವಿಚಾರ. ಈ ಹೋರಾಟಕ್ಕೆ ಇಡೀ ರಾಜ್ಯದ ಜನರ ಬೆಂಬಲ ಅಗತ್ಯ. ಈ ಹೋರಾಟಕ್ಕೆ ಜಯ ಆಗಲೇಬೇಕು. ಹೋರಾಟ ಸೋತರೆ ರೈತ ಕುಲ ನಾಶವಾದಂತೆ. ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ಭೂಸ್ವಾಧೀನವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಇಡೀ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿರೇಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಇಂತಹ ಹೋರಾಟ ಕಾಣಲು ಸಾಧ್ಯವಿಲ್ಲ. ದೇಶದ ಇತಿಹಾಸದ ಹೋರಾಟಗಳು ಇಡೀ ದೇಶದ ಜನ ತಿರುಗಿ ನೋಡುವಂತೆ ಮಾಡಬೇಕು. ಈ ಸರಕಾರ ಬಂದರೆ ರೈತರ ಉದ್ದಾರ ಮಾಡುತ್ತೆ ಎಂದು ಸರಕಾರಕ್ಕೆ ಬೆಂಬಲ ನೀಡಿದ್ದವು. ಅವರು ಈ ಹಿಂದೆ ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಕೈಬಿಡುವುದಾಗಿ ಹೇಳಿದ್ದರು. ಆದರೆ ಈಗ ಅವರಿಗೆ ಮತಿಭ್ರಮಣೆಯಾಗಿದೆ. ಆಗುವುದಿಲ್ಲ ಎಂದು ಹೇಳಿದ್ದರು. ಈ ಹಿಂದಿನ ಸಭೆಯಲ್ಲಿ ಒಂದು ತಿಂಗಳ ಸಮಯ ಕೇಳಿದ್ದರು. ಇದೀಗ ಮತ್ತೊಂದು ಸಭೆ ನಡೆದಿದ್ದು, ಮತ್ತೆ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿಸಿದರು.

“ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರಿಗೆ ಸ್ವಾಧೀನ ಕೈಬಿಡುವ ಮನಸ್ಥಿತಿಯಲ್ಲಿ ಇಲ್ಲ. ಹಾಗಾಗಿ ನಮ್ಮ ರೈತರು ಇನ್ನೂ ಉಗ್ರವಾದ ಹೋರಾಟ ರೂಪಿಸಬೇಕು. ಇಲ್ಲಿ ಉತ್ತಮ ಬೆಲೆ ಬೆಳೆಯುವ ರೈತರು ಇದ್ದಾರೆ. ಸರಕಾರ ಕೂಡಲೇ ಎಚ್ಚೆತ್ತು ಭೂಸ್ವಾಧೀನ ಕೈಬಿಡಬೇಕು” ಎಂದು ಹೋರಾಟಗಾರರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ದೇವನಹಳ್ಳಿ | ಎಲ್ಲ ಸರ್ಕಾರಗಳು ಜನ ವಿರೋಧಿ, ರೈತ ವಿರೋಧಿ: ಬಹುಭಾಷಾ ನಟ ಪ್ರಕಾಶ್ ರಾಜ್
ಧರಣಿ ಸಮಾವೇಶದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ದಸಂಸ ತಿಮ್ಮರಾಯಪ್ಪ, ನಾರಾಯಣಸ್ವಾಮಿ, ವೈಜ್ಞಾಪ್ಪ, ಮುನಿಸ್ವಾಮಿ, ವೆಂಕಟೇಶ್, ನಾರಾಯಣಪ್ಪ, ಚಂದ್ರಶೇಖರ್, ಬಿ ಎನ್ ಕೃಷ್ಣಪ್ಪ, ನಾಗರಾಜು, ಲಕ್ಷ್ಮಿ, ಪ್ರಾಂತ ರೈತ ಸಂಘದ ಚಂದ್ರಶೇಖರ್, ಹಿರಿಯರು, ಬರಹಗಾರರಾದ ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಶ್ರೀಪಾದ್ ಭಟ್, ನಾಗರಾಜ್, ರಕ್ಷಣಾ ವೇದಿಕೆಯ ಚಂದ್ರಣ್ಣ, ಬಿಎಸ್‌ಪಿಯ ರಾಮಾಂಜಿನಪ್ಪ, ಹಾಪ್ ಕಾಮ್ಸ್ ನಿರ್ದೇಶಕ ವೆಂಕಟೇಶ್, ನಂಡಗುಂದ ವೆಂಕಟೇಶ್, ಲಕ್ಷ್ಮಿ ವೆಂಕಟೇಶ್, ದಸಂಸ ಜಿಲ್ಲಾ ಸಂಚಾಲಕ ಕೊರದುರು ಶ್ರೀನಿವಾಸ್, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ ಜೇ ಹಳ್ಳಿ ನಾರಾಯಣಸ್ವಾಮಿ, ವಾಸವಿ, ಪೀಲ್ಡಿ ಬ್ಯಾಕ್ ನಿರ್ದೇಶಕ ಜಯರಾಂ ಗೌಡ ಹಾಗೂ ಇತರರು ಇದ್ದರು.
