ಕನ್ನಡ ಭಾಷೆ ಪುರಾತನ ಭಾಷೆಗಳಲ್ಲಿ ಒಂದಾಗಿದ್ದು, ಅತ್ಯಂತ ಸುಂದರ ಭಾಷೆಯಾಗಿದೆ. ನಾಡಿನಲ್ಲಿರುವ ಎಲ್ಲರೂ ನಮ್ಮ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಈ ಭಾಷೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಭು.ಬಿ ಚವ್ಹಾಣ ಹೇಳಿದರು.
ಔರಾದ ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಬೇರೆ ಭಾಷೆಗಳನ್ನು ಗೌರವಿಸುವುದು ತಪ್ಪಲ್ಲ. ಆದರೆ ಕನ್ನಡವನ್ನು ಮಾತನಾಡಬೇಕು. ನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಛೇರಿಗಳು, ಅಂಗಡಿಗಳು, ಸಂಘ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಾಣುವಂತಾಗಬೇಕು. ನಾಡಿನೆಲ್ಲೆಡೆಯೂ ಕನ್ನಡಮಯ ವಾತಾವರಣ ನಿರ್ಮಿಸಲು ನಾವೆಲ್ಲರೂ ಮುಂದಾಗಬೇಕು” ಎಂದರು.
“ನಾಡನ್ನು ಕಟ್ಟಿ ಬೆಳೆಸುವಲ್ಲಿ ಅನೇಕ ಹೋರಾಟಗಾರರ ತ್ಯಾಗ ಪರಿಶ್ರಮ ಅಡಗಿದೆ. ಅಂತಹ ಮಹನೀಯರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಶಾಲೆಯಲ್ಲಿ ಮಕ್ಕಳಿಗೆ ನಾಡಿನ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಇನ್ನಷ್ಟು ಬೋಧಿಸಬೇಕು. ಭಾಷೆಯ ಜೊತೆಗೆ ನಮ್ಮ ನೆಲ, ಜಲ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಎಲ್ಲರ ಮೇಲಿದೆ” ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರು ಧ್ವಜಾರೋಹಣ ನೆರವೇರಿಸಿದರು. ಸಾಹಿತಿ ಹಾಗೂ ಶಿಕ್ಷಕ ಶಿವಲಿಂಗ ಹೇಡೆ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಿಸಲಾಯಿತು. ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬರ ಘೋಷಿಸುವರೆಗೂ ಸುಮ್ಮನಿರುವುದಿಲ್ಲ:
ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಸಮರ್ಪಕ ಬೆಳೆಯಾಗದೇ ರೈತರು ತೀವ್ರ ಸಂಕಷ್ಟ ಎದುರಿಸುತ್ತಾರೆ. ಮೊದಲ ಹಂತದಲ್ಲಿಯೇ ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಬೇಕಿತ್ತು. ಸರ್ಕಾರ ಮಾಡದೇ ಇರುವುದರಿಂದ ಮುಖ್ಯಮಂತ್ರಿಗಳು, ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ವಾಸ್ತವ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ” ಎಂದಿದ್ದಾರೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಬರ ನಿರ್ವಹಣೆ ಮಾನದಂಡಗಳ ಅನ್ವಯ ಔರಾದ(ಬಿ) ಹಾಗೂ ಕಮಲಗರ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇರುವ ಬಗ್ಗೆ ಸರ್ಕಾರಕ್ಕೆ ತಿಳಿಸಿರುತ್ತದೆ. ನಾನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳನ್ನು ಮತ್ತು ಸಂಬAಧಿಸಿದ ಸಚಿವರನ್ನು ಭೇಟಿ ಮಾಡಿ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದು ಒತ್ತಾಯಿಸುತ್ತೇನೆ. ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅವಶ್ಯಕತೆಯಿಲ್ಲ. ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವ ವರೆಗೆ ಸುಮ್ಮನಿರುವುದಿಲ್ಲ” ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾವನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಅಳಿಯ
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್, ಸಿಪಿಐ ರಘುವೀರಸಿಂಗ್ ಠಾಕೂರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಕಸಾಪ ತಾಲ್ಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.