‘ರಾಜಕಾರಣಿಗಳ ಸುದ್ದಿಗಿಂತ ಜನರು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮುನ್ನೆಲೆಗೆ ತರಬೇಕಾದದ್ದು ಪತ್ರಕರ್ತರಾದವರ ಕರ್ತವ್ಯ. ಪತ್ರಕರ್ತರು ತಮ್ಮ ಈ ಕರ್ತವ್ಯದ ಮೂಲಕವೇ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು’ ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅಭಿಪ್ರಾಯಿಸಿದರು.
ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ತಮ್ಮ ಹೊಸ ಪುಸ್ತಕ ‘2024: The Election that Surprised India’ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆಸಿದ ಸಂವಾದದ ವೇಳೆ ಅವರು ಮಾತನಾಡಿದರು.
‘ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನು ಹೇಳಲೇಬೇಕಿದೆ. ಕೋವಿಡ್ ಸಂದರ್ಭದಲ್ಲಿ ಕೇವಲ 4 ಲಕ್ಷ ಮೃತಪಟ್ಟಿದ್ದಾರೆಂದು ಸರ್ಕಾರದ ವರದಿಗಳು ಹೇಳುತ್ತಿವೆ. ಕೆಲವೊಂದು ಖಾಸಗಿ ಸಂಸ್ಥೆಗಳು 40 ಲಕ್ಷ ಮೃತಪಟ್ಟರೆಂದು ವರದಿ ಮಾಡಿವೆ. ನಿಜಕ್ಕೂ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದನ್ನು ಅರಿತುಕೊಳ್ಳುವ ಹಕ್ಕು ಈ ದೇಶದ ಪ್ರತಿಯೊಬ್ಬ ಜವಾಬ್ದಾರಿಯುವ ನಾಗರಿಕರಿಗೆ ಇದೆ. ಅದನ್ನು ಪತ್ರಕರ್ತ ಪ್ರಶ್ನಿಸಿದರೆ, ಆತ ಭಾರತ ವಿರೋಧಿ ಹೇಗಾಗುತ್ತಾನೆ?’ ಎಂದು ರಾಜ್‌ದೀಪ್ ಪ್ರಶ್ನಿಸಿದರು.
‘ನಮ್ಮ ದೇಶದ ವೈವಿಧ್ಯತೆಯೇ ಸುಭದ್ರವಾದ ಪಂಚಾಗ. 140 ಕೋಟಿ ಜನರು ವಾಸಿಸುತ್ತಿರುವುದೇ ದೊಡ್ಡ ಸಂಪತ್ತು. ಮುಂಬೈನ ಧಾರಾವಿಯ ಸ್ಲಂನಲ್ಲಿ ವಾಸಿಸುತ್ತಿರುವ ಜನರಿಗೂ, ಉದ್ಯಮಿ ಅಂಬಾನಿಗೂ ಇರುವ ಹಕ್ಕು ಮತದಾನವಾಗಿದೆ. ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕಿನ ಮೂಲಕ 2024ರ ಲೋಕಸಭಾ ಚುನಾವಣೆಯು ಈ ದೇಶದ ಜನರಿಗೆ ಏನು ಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಆ ಮೂಲಕ ‘ಚಾರ್ ಸೌ ಪಾರ್’ ಎನ್ನುತ್ತಿದ್ದವರನ್ನೂ ಸೇರಿಸಿ ಎಲ್ಲರ ರಾಜಕೀಯ ಲೆಕ್ಕಾಚಾರವು ಜನರು ಉಲ್ಟಾಪಲ್ಟಾ ಮಾಡಿದರು. 2024ರ ಚುನಾವಣಾ ಫಲಿತಾಂಶವೇ ನನ್ನನ್ನು ಈ ಪುಸ್ತಕ ಬರೆಯಲು ಪ್ರೇರೇಪಿಸಿತು’ ಎಂದು ತಿಳಿಸಿದರು.
"2024: The Election that Surprised India" Book Written By @sardesairajdeep Released at Presidency University, Bengaluru @MsMayaSharma @Uni_Presidency pic.twitter.com/jeNEd1wEHm
— Irshad Venur (@irshad_venur) February 15, 2025
‘ವಾಟ್ಸಾಪ್, ಫೇಸ್‌ಬುಕ್ ನಮ್ಮ ಜೀವನದ ನೆಮ್ಮದಿಯನ್ನು ಹಾಳುಗೆಡವುತ್ತಿದೆ. ಈ ಬಗ್ಗೆ ವಿದ್ಯಾರ್ಥಿ, ಯುವಕರು ಜಾಗೃತರಾಗಬೇಕಿದೆ. ನೈಜ ಯುನಿವರ್ಸಿಟಿಗಳಿಗಿಂತ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಕೋಟ್ಯಂತರ ಜನರಿದ್ದಾರೆ. ಎಐ ತಂತ್ರಜ್ಞಾನ ಬಂದಿರುವ ಇಂದಿನ ಆಧುನಿಕ ಸಮಯದಲ್ಲಿ ಸುಳ್ಳುಸುದ್ದಿಗಳ ಬಗ್ಗೆ ಜನರು ಜಾಗರೂಕರಾಗಿರಬೇಕು. ಪುಸ್ತಕ ಓದುವವರಾಗಬೇಕು. ಪುಸ್ತಕದಿಂದ ಜ್ಞಾನ ವೃದ್ಧಿಯಾಗುತ್ತದೆ’ ಎಂದು ರಾಜ್‌ದೀಪ್ ಸರ್ದೇಸಾಯಿ ತಿಳಿಸಿದರು.
ಇದನ್ನು ಓದಿದ್ದೀರಾ? ನಾಲ್ಕೈದು ವರ್ಷ ಬದುಕಿರುತ್ತೇನೆ; ನೀರಿಗಾಗಿ ಹೋರಾಟ ಮಾಡುತ್ತೇನೆ: ದೇವೇಗೌಡ
ಸಂವಾದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತೆ ಮಾಯಾ ಶರ್ಮಾ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ನಿಸಾರ್ ಅಹ್ಮದ್, ಕುಲಪತಿ ಪ್ರೊ.ವಿಜಯನ್ ಇಮ್ಯಾನುಯೆಲ್, ಉಪಕುಲಪತಿಗಳಾದ ಡಾ. ವಿದ್ಯಾ ಶೆಟ್ಟಿ,ಡಾ. ಸಮೀರುದ್ದೀನ್ ಖಾನ್, ರಿಜಿಸ್ಟ್ರಾರ್ ಡಾ. ಸಮೀನಾ ನೂರ್ ಅಹ್ಮದ್, ಡಾ. ನಫೀಸಾ ಅಹ್ಮದ್, ಲಿಟ್ಲ್ ಫ್ಲವರ್ ಶಾಲೆಯ ಚೇರ್‌ಮೆನ್ ಇಕ್ಬಾಲ್ ಅಹ್ಮದ್ ಅಹ್ಮದ್ ಸೇರಿದಂತೆ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
