ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ‘ಆಭರಣ’ ಚಿನ್ನದ ಮಳಿಗೆಗಳಿಗೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವೆಡೆ ತಪಾಸಣೆ ನಡೆಸುತ್ತಿದ್ದಾರೆ.
ಉಡುಪಿ, ಕಾರ್ಕಳ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ, ಮಂಗಳೂರು, ಪುತ್ತೂರು ಸೇರಿದಂತೆ ಹಲವೆಡೆ ‘ಆಭರಣ’ ಚಿನ್ನದ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕರಾವಳಿಯ ಅನೇಕ ಭಾಗಗಳಲ್ಲಿ ತನ್ನ ಶೋರೂಮ್ ಹೊಂದಿರುವ ‘ಆಭರಣ’ ಚಿನ್ನದ ಮಳಿಗೆಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನೋವಾ ಕಾರಿನಲ್ಲಿ ಬೆಳ್ಳಂಬೆಳಗ್ಗೆ ಆಗಮಿಸಿದ್ದ ಅಧಿಕಾರಿಗಳು, ಮಂಗಳೂರಿನ ಶಿವಭಾಗ್, ಉಡುಪಿಯ ಕಾರ್ಪೊರೇಶನ್ ಬ್ಯಾಂಕ್ ಬಳಿ ಇರುವ ಶೋರೂಂ ಸೇರಿದಂತೆ ಎಲ್ಲ ಕಡೆಗೆ ದಾಳಿ ನಡೆಸಿದ್ದು, ಪ್ರವೇಶದ್ವಾರವನ್ನು ಬಂದ್ ಮಾಡಿ, ದಾಖಲೆಗಳನ್ನು ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದ ಆಭರಣ ಜ್ಯುವೆಲ್ಲರಿ, ರಾಜ್ಯದಲ್ಲಿ ಒಟ್ಟು 14 ಮಳಿಗೆಗಳು ಹಾಗೂ ಗೋವಾದಲ್ಲಿ ಒಂದು ಮಳಿಗೆ ಹೊಂದಿದೆ. ಎಲ್ಲ ಕಡೆಗಳಲ್ಲೂ ಏಕ ಕಾಲದಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
1935ರಲ್ಲಿ ದಿವಂಗತ ಬುರ್ಡೆ ಸದಾನಂದ ಕಾಮತ್ ಎಂಬುವವರು ‘ನಿಯೋ ಜ್ಯುವೆಲ್ಲರಿ ಮಾರ್ಟ್’ ಎಂಬ ಸಂಸ್ಥೆಯನ್ನು ಉಡುಪಿಯಲ್ಲಿ ಪ್ರಾರಂಭಿಸಿದ್ದರು. ಆ ಬಳಿಕ ಸಂಸ್ಥಾಪಕರ ಪುತ್ರ ಮಧುಕರ್ ಎಸ್.ಕಾಮತ್ ಎಂಬವರು ಉಡುಪಿಯಲ್ಲಿ ‘ಆಭರಣ ಜ್ಯುವೆಲರ್ಸ್’ ಅನ್ನು ಪ್ರಾರಂಭಿಸಿದರು.
ಅಂದಿನಿಂದ ಮಧುಕರ್ ಎಸ್. ಕಾಮತ್ ಅವರ ಮಕ್ಕಳಾದ ಸುಭಾಸ್ ಎಂ.ಕಾಮತ್ ಮತ್ತು ಮಹೇಶ್ ಎಂ. ಕಾಮತ್ ಮತ್ತು ಅವರದ್ದೇ ಕುಟುಂಬಸ್ಥರು ಚಿನ್ನದ ಉದ್ಯಮವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇದೀಗ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ‘ಆಭರಣ ಜ್ಯುವೆಲ್ಲರ್ಸ್’ ಮಳಿಗೆಗಳು ತಲೆ ಎತ್ತಿವೆ.