ಬೆಳಗಾವಿಯಲ್ಲಿ ರಾಜ್ಯದ ಎರಡನೇ ಅತಿದೊಡ್ಡ ಕೃಷಿ ಎಪಿಎಂಸಿ ಹೋಲ್ಸೇಲ್ ತರಕಾರಿ ಮಾರುಕಟ್ಟೆ ಇರುವಾಗಲೂ 3 ವರ್ಷದ ಹಿಂದೆ ನಿರ್ಮಾಣವಾಗಿರುವ ಖಾಸಗಿ ಜೈ ಕಿಸಾನ್ ಹೋಲ್ ಸೇಲ್ ಮಾರುಕಟ್ಟೆಯು ರೈತರ ಶೋಷಣೆಯ ಪ್ರತೀಕವಾಗಿ ನಿಂತಿದೆ ಎನ್ನುವುದು ರೈತ ಮುಖಂಡರ ಆರೋಪವಾಗಿದೆ.
ಸರ್ಕಾರಿ ಎಪಿಎಂಸಿ ಹೋಲ್ಸೇಲ್ ತರಕಾರಿ ಮಾರುಕಟ್ಟೆ ಉಳಿಸಬೇಕು. ಖಾಸಗಿ ಮಾರುಕಟ್ಟೆ ಬಂದ್ ಮಾಡಬೇಕು. ಎಪಿಎಂಸಿ ಕಾಯ್ದೆ ಪರಿಣಾಮವಾಗಿ ಬೆಳಗಾವಿ ಸರ್ಕಾರಿ ಎಪಿಎಂಸಿ ಮಾರುಕಟ್ಟೆ ಇದ್ದರೂ ಪರ್ಯಾಯವಾಗಿ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಗೆ ಅನುಮತಿ ಕೊಡಲಾಗಿದೆಯೆಂದು ಆರೋಪಿಸಿ ವರ್ತಕರು ಹಲವು ವರ್ಷಗ’ಳಿಂದಲೂ ಪ್ರತಿಭಟನೆ ನಡೆಸುತ್ತಿದ್ದರು. 2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿರುದ್ಧವೂ ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಈ ವೇಳೆ ಡಿ ಕೆ ಶಿವಕುಮಾರ್ ಅವರು ಭೇಟಿ ನೀಡಿ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಂಕಷ್ಟ ಈಡೇರಿಸುವುದಾಗಿ ಹಾಗೂ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಬಂದ್ ಮಾಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ತಮ್ಮದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಡಿಕೆಶಿ ಈವರೆಗೂ ರೈತರ ಬಳಿ ತಿರುಗಿಯೂ ನೋಡಿಲ್ಲ.
ಎಪಿಎಂಸಿ ಹೋಲ್ಸೇಲ್ ತರಕಾರಿ ಮಾರುಕಟ್ಟೆ ಕುರಿತಂತೆ ಸರ್ಕಾರ ಉಸಿರೆತ್ತದ ಹಿನ್ನೆಲೆಯಲ್ಲಿ, ಬೆಳಗಾವಿ ಅಧಿವೇಶನದ ವೇಳೆ ರೈತರೇ ಮತ್ತೊಮ್ಮೆ ಸರ್ಕಾರಕ್ಕೆ ಮನವರಿಕೆ ಮಾಡಲು ಮುಂದಾಗಿದ್ದಾರೆ.

ರೈತ ಮುಖಂಡರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬೆಳಗಾವಿಯಲ್ಲಿರುವ ಸರ್ಕಾರಿ ಕೃಷಿ ಮಾರುಕಟ್ಟೆಯು ಸರ್ಕಾರದ ಅಧೀನದಲ್ಲಿದ್ದು, ಪ್ರತಿಯೊಂದು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ನಿಗದಿ ಮಾಡಲಾಗುತ್ತದೆ. ಆದರೆ ನಗರದಲ್ಲಿ ತಲೆ ಎತ್ತಿರುವ ಖಾಸಗಿ ಜೈ ಕಿಸಾನ್ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ನಿಶ್ಚಿತ ಬೆಲೆ ನಿಗದಿ ಮಾಡುವವರು ಯಾರು? ಖರೀದಿ ಮಾಡುವವರು ಯಾರು? ಖರೀದಿಸಿದ ನಂತರ ಇಲ್ಲಿನ ಸಗಟು ವ್ಯಾಪಾರಸ್ಥರು ನ್ಯಾಯಯುತವಾದ ಬೆಲೆ ನೀಡುವ ವಿಶ್ವಾಸ ರೈತರಲ್ಲಿ ಇಲ್ಲ. ಇಲ್ಲಿ ರೈತರಿಗೆ ಶೋಷಣೆಯಾಗುತ್ತಿದೆ” ಎಂದು ರೈತ ಮುಖಂಡರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

“2022ರಲ್ಲಿ ಭಾರತೀಯ ಕೃಷಿಕ ಸಮಾಜದ ರೈತ ಸಂಘಟನೆ ಮತ್ತು ಸರ್ಕಾರಿ ಎಪಿಎಂಸಿ ಸಗಟು ವ್ಯಾಪಾರಸ್ಥರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದಾಗ ಇಂದಿನ ಉಪಮುಖ್ಯಮಂತ್ರಿ ಆಗಮಿಸಿ ಉಪವಾಸ ಕೈ ಬಿಡುವಂತೆ ಮನವಿ ಮಾಡಿ ನಮ್ಮ ಸರ್ಕಾರ ಬಂದ ನಂತರ ನಿಮ್ಮ ಬೇಡಿಕೆ ಈಡೇರಿಸುತ್ತೇವೆಂದು ಹೇಳಿದ್ದರು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಈ ಕಡೆ ಗಮನ ಹರಿಸಿಲ್ಲ” ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬೆಳಗಾವಿ ನಗರದಲ್ಲಿ ನಿರ್ಮಾಣವಾಗಿರುವ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ಪ್ರಾರಂಭವಾದುದರಿಂದ ಎಪಿಎಂಸಿಯಲ್ಲಿನ ಸಗಟು ತರಕಾರಿ ಮಾರುಕಟ್ಟೆಯು 03 ವರ್ಷಗಳಿಂದ ಸಂಪೂರ್ಣವಾಗಿ ತರಕಾರಿ ವ್ಯಾಪಾರವಿಲ್ಲದೆ ಮುಚ್ಚಿದೆ. ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಸರ್ಕಾರವನ್ನು ನಂಬಿ ಮಳಿಗೆ ಪಡೆದ ನಾವು ಎಲ್ಲ ವ್ಯಾಪಾರಸ್ಥರು ಆರ್ಥಿಕ, ದೈಹಿಕ ಮತ್ತು ಮಾನಸಿಕವಾಗಿ ಕುಂದಿದ್ದೆವೆ. ನಮ್ಮನ್ನು ನಂಬಿದ ಕುಟುಂಬ ಸದಸ್ಯರು ಕೂಲಿ ಕಾರ್ಮಿಕರು ವಾಹನ ಚಾಲಕರು(ಮಾಲೀಕರು) ಗುಮಾಸ್ತರು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದೇವೆ” ಎಂದು ಕಳವಳ ವ್ಯಕ್ತಪಡಿಸಿದರು.

“ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿ ವ್ಯಾಪಾರ ವಹಿವಾಟು ಸುಗಮವಾಗಿ ನಡೆದುಕೊಂಡು ಹೋಗುವಂತೆ ಮಾಡಬೇಕು. ಇಲ್ಲವಾದಲ್ಲಿ ತಮ್ಮ ಕಚೇರಿಯ ಮುಂದೆ ಎಲ್ಲ ವ್ಯಾಪಾಸ್ಥರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ” ಎಂದು ಸರ್ಕಾರಿ ಎಪಿಎಂಸಿ ಮಾರುಕಟ್ಪೆಯ ಸಗಟು ವ್ಯಾಪಾರಸ್ಥರು ಹಾಗೂ ಇಲ್ಲಿ ಕೆಲಸ ಮಾಡುವ ಹಮಾಲರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ
ಈ ವೇಳೆ ಸಗಟು ವ್ಯಾಪಾರಸ್ಥರು, ಹಮಾಲರು ಮತ್ತು ವಾಹನ ಚಾಲಕರು ಜೊತೆಗೂಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ನ್ಯಾಯಕ್ಕಾಗಿ ಹೋರಾಡುವುದಾಗಿ ಹೇಳಿಕೊಂಡಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು