- ನಂದಿಪರ್ವತ ಆವರಣದಲ್ಲಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆ
- ಹತ್ಯೆಯನ್ನು ಖಂಡಿಸಿ ಚಿಕ್ಕೋಡಿಯಲ್ಲಿ ನಾಳೆ ಶಾಂತಿಯುತ ಪ್ರತಿಭಟನೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೋಡಿ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಾಸಕ ಲಕ್ಷ್ಮಣ ಸವದಿ, ಪ್ರಕರಣದ ಬಗ್ಗೆ ಸೋಮವಾರದಿಂದ ಮತ್ತೆ ಆರಂಭವಾಗಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆ ನಡೆಸುವುದಾಗಿ ಹೇಳಿದರು.
ಹಿರೇಕೋಡಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ, ‘ಜೈನಮುನಿ ಹತ್ಯೆಯಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ. ಬೆಳಗಾವಿ ಜಿಲ್ಲೆಯ ಶಾಸಕರು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ನಾಳೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತಂದು, ಅಧಿವೇಶನದಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸುತ್ತೇವೆ. ಮಹಾರಾಜರನ್ನು ಹತ್ಯೆಗೈದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಕಾನೂನು ಚೌಕಟ್ಟಿನಲ್ಲಿ ಗರಿಷ್ಠ ಶಿಕ್ಷೆ ಕೊಡಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ’ ಎಂದು ತಿಳಿಸಿದರು.

ನಂದಿಪರ್ವತ ಆವರಣದಲ್ಲಿ ಜೈನಮುನಿ ಅಂತ್ಯಕ್ರಿಯೆ
ಜೈನ ಮಠಗಳ ಮಹಾಸ್ವಾಮಿ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಹಾಗೂ ವರೂರ್ ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಜೈನ ಧರ್ಮದ ಧಾರ್ಮಿಕ ವಿಧಿವಿಧಾನಗಳಂತೆ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆಯು ನಂದಿಪರ್ವತದ ಆವರಣದಲ್ಲಿ ನೆರವೇರಿತು.
ಅಂತ್ಯಕ್ರಿಯೆಯಲ್ಲಿ ಸಾವಿರಾರು ಭಕ್ತರು ಸೇರಿ, ಅಂತಿಮ ನಮನ ಸಲ್ಲಿಸಿದರು. ಭೀಕರ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಕಾಮಕುಮಾರ ನಂದಿ ಮಹಾರಾಜ (51) ಅವರು ಕಳೆದ ಎರೆಡು ದಿನಗಳ ಹಿಂದೆ ಭೀಕರವಾಗಿ ಹತ್ಯೆಗೀಡಾಗಿದ್ದರು. ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಳೆ ಶಾಂತಿಯುತ ಪ್ರತಿಭಟನೆ
ಅಂತ್ಯಕ್ರಿಯೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, “ಜೈನ ಧರ್ಮದ ಅದ್ಭುತ ಸೂರ್ಯವೊಂದು ಅಸ್ತಂಗತವಾಗಿದೆ. ಈ ಹತ್ಯೆಯನ್ನು ಖಂಡಿಸಿ ನಾವು ನಾಳೆ ಚಿಕ್ಕೋಡಿ ಆರ್‍ಡಿಪಿ ಕಾಲೇಜಿನಿಂದ 10 ಗಂಟೆಗೆ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇನ್ನು ಮುಂದೆ ಯಾವುದೇ ಸ್ವಾಮೀಜಿಗಳಿಗೆ ಈ ರೀತಿ ಆಗದಂತೆ ರಕ್ಷಣೆ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಲು ಶಾಂತಿಯುತ ಪ್ರತಿಭಟನೆ ನಡೆಯಲಿದೆ” ಎಂದರು.