- ಈ ಪ್ರಕರಣ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ
- ಸರ್ಕಾರ ಯಾರ ರಕ್ಷಣೆಗೂ ನಿಂತಿಲ್ಲ: ಸಿದ್ದರಾಮಯ್ಯ
ಜೈನಮುನಿ ಹತ್ಯೆ, ಟಿ ನರಸೀಪುರದಲ್ಲಿ ನಡೆದ ಹತ್ಯೆ ಹಾಗೂ ಕಲಬುರ್ಗಿ ಪ್ರಕರಣ ಸೇರಿ ಯಾವುದೇ ಪ್ರಕರಣವಿರಲಿ, ಸರ್ಕಾರ ಯಾರ ರಕ್ಷಣೆಗೂ ಮುಂದಾಗುವುದಿಲ್ಲ. ನಮ್ಮ ಪೊಲೀಸರಿಂದಲೇ ಎಲ್ಲ ಆಯಾಮಗಳಿಂದಲೂ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮಂಗಳವಾರ ನಡೆದ ಏಳನೇ ದಿನದ ಕಲಾಪದಲ್ಲಿ ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕರು ಸದನದಲ್ಲಿ ಪಟ್ಟು ಹಿಡಿದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, “ಯಾವುದೇ ಪ್ರಕರಣ ಇರಲಿ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ಪ್ರಾಮಾಣಿಕವಾಗಿ ಯಾರೇ ತಪ್ಪಿತಸ್ಥರು ಇದ್ದರೂ ಅವರು ಎಷ್ಟೇ ದೊಡ್ಡವರು ಆಗಿರಲಿ ಅವರಿಗೆ ಶಿಕ್ಷೆ ಕೊಡಿಸುತ್ತೇವೆ” ಎಂದು ಭರವಸೆ ನೀಡಿದರು.
ಪರಮೇಶ್ವರ್ ಶ್ಲಾಘನೆ
ಚಿಕ್ಕೋಡಿಯ ನಂದಿಪರ್ವತದ ಜೈನಮುನಿ ಕಾಮಕುಮಾರ ನಂದಿ ಹತ್ಯೆ ಪ್ರಕರಣದಲ್ಲಿ ನಮ್ಮ ಪೊಲೀಸರ ಶ್ರಮವನ್ನು ನಾವು ಶ್ಲಾಘಿಸುತ್ತೇವೆ. ಕೇವಲ ಆರು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ, ಜೈನಮುನಿ ಅವರ ದೇಹವನ್ನು ಪತ್ತೆ ಮಾಡಿದ್ದಾರೆ. ಅವರ ಕಾರ್ಯವನ್ನು ನಾನು ನಮ್ಮ ಸರ್ಕಾರ ಶ್ಲಾಘಿಸಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಜೈನಮುನಿ ಹತ್ಯೆ, ಟಿ ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ವಿಚಾರವಾಗಿ ನಡೆದ ಚರ್ಚೆಯಲ್ಲಿ ಪ್ರತಿಪಕ್ಷದ ನಾಯಕರಿಗೆ ಉತ್ತರಿಸಿದ ಗೃಹ ಸಚಿವರು, “ನಮ್ಮ ಪೊಲೀಸರು ಯಾವುದೇ ಮಾಹಿತಿ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಅನೇಕ ವಿಚಾರಗಳು ಪೊಲೀಸರ ಬಳಿ ಇವೆ. ತನಿಖೆ ನಡೆಯುತ್ತಿರುವುದರಿಂದ ಅದನ್ನು ಸದನದಲ್ಲಿ ಹೇಳಲು ಸಾಧ್ಯವಿಲ್ಲ. ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಜೈನಮುನಿ ಹತ್ಯೆ ಪ್ರಕರಣ | ಜುಲೈ 17ರವರೆಗೆ ಆರೋಪಿಗಳು ಪೊಲೀಸ್ ಕಸ್ಟಡಿಗೆ
“ಜೈನಮುನಿಯ ಬರ್ಬರ ಹತ್ಯೆ ನಾವು ಎಂದೂ ಕಂಡಿರಲಿಲ್ಲ. ನಿಜಕ್ಕೂ ನೋವು ತಂದಿದೆ. ಜೈನಮುನಿ ಸರ್ವವನ್ನೂ ತ್ಯಾಗ ಮಾಡಿ ಧರ್ಮದ ಸೇವೆಗೆ ಅರ್ಪಿಸಿಕೊಂಡವರನ್ನು ಭೂಮಿ ಮೇಲೆ ಬದುಕಲು ಬಿಡಲ್ಲ ಎಂದರೆ ಸಮಾಜ ಯಾವ ಕಡೆಗೆ ಹೋಗುತ್ತಿದೆ? ನಿಜಕ್ಕೂ ನನಗೆ ಭಯವಾಗುತ್ತಿದೆ” ಎಂದು ಪರಮೇಶ್ವರ್ ತಿಳಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, “ಜೈನ ಮುನಿಯ ಹತ್ಯೆ ಪ್ರಕರಣದಲ್ಲಿ ಕೆಲವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ನಾವು ಸಿಬಿಐಗೆ ಈ ಪ್ರಕರಣ ವಹಿಸುವಂತೆ ಕೋರುತ್ತಿದ್ದೇವೆ. ನಾವು ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ನಾವು ಧರಣಿ ಕೈಗೊಳ್ಳುತ್ತೇವೆ” ಎಂದು ಸದನದ ಬಾವಿಗಿಳಿದರು.
ಸಭಾಧ್ಯಕ್ಷರು ಮಧ್ಯಪ್ರವೇಶಿಸಿ, ”ಬೆಳಗ್ಗೆಯಿಂದ ನೋಡುತ್ತಿರುವೆ, ಬಿಜೆಪಿ ಸದಸ್ಯರು ಸದನ ನಡೆಯಲು ಬಿಡುತ್ತಿಲ್ಲ. ಬರೀ ನೆಪಗಳನ್ನು ಹುಡುಕಿಕೊಂಡು ಸದನದ ಘನತೆ ಹಾಳು ಮಾಡುತ್ತಿದ್ದಾರೆ” ಎಂದು ಕಟುವಾಗಿಯೇ ಮಾತನಾಡಿ, ಸದನವನ್ನು 15 ನಿಮಿಷ ಮುಂದೂಡಿದರು.