ಪ್ರಾಚೀನ ಜೀವರಕ್ಷಣ ಕಲೆಯಾದ ಜಲಸ್ತಂಭನ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ 65ರ ಪ್ರಾಯದ ಬಿ.ಎಸ್.ಪ್ರಸಾದ್ ಜೀವರಕ್ಷಣ ಕಲೆಗೆ ಚೈತನ್ಯ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. ಜೀವರಕ್ಷಣ ಕಲೆಯನ್ನು ಉದ್ಯಮವಾಗಿಸಿಕೊಂಡಿರುವ ಕಾಲದಲ್ಲಿ 65ರ ಪ್ರಸಾದ್ ಉಚಿತ ತರಬೇತಿ ನೀಡಲು ಅಣಿಯಾಗಿರುವುದು ಶ್ಲಾಘನೀಯ.
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸೂರು ತಾಲೂಕು ಬಾಗಲೂರು ಗ್ರಾಮಕ್ಕೆ ಸೇರಿದ ಬಿ.ಎಸ್.ಪ್ರಸಾದ್ ಕಳೆದ 35 ವರ್ಷಗಳಿಂದ ನಾಡಿನ ಉದ್ದಗಲಕ್ಕೂ ಸಂಚರಿಸಿ ಅವಕಾಶ ಸಿಕ್ಕಲ್ಲೆಲ್ಲಾ ಜಲಸ್ತಂಭನ ವಿದ್ಯೆ ಪ್ರದರ್ಶಿಸುತ್ತಾ ಬಂದಿದ್ದಾರೆ.
ಬೆಂಗಳೂರಿನಲ್ಲಿರುವ ಜನರಲ್ ತಿಮ್ಮಯ್ಯ ಸಾಹಸ ಕಲೆಗಳ ಅಕಾಡೆಮಿ ಇವರ ಸಾಹಸ ಕಲೆಯನ್ನು ಗುರುತಿಸಿ, ಪ್ರಶಂಸಾ ಪತ್ರವನ್ನು ಸಹ ನೀಡಿದ್ದಾರೆ. ಆಂಧ್ರ ಪ್ರದೇಶದಲ್ಲಿಯೂ ಕೂಡ ಪ್ರದರ್ಶನ ನೀಡಿರುವುದು ಮತ್ತೊಂದು ಹೆಗ್ಗಳಿಕೆ.

ಕಲಿತ ವಿದ್ಯೆ ಮಣ್ಣಾಗಬಾರದು ಎಂಬ ಕಾರಣಕ್ಕೆ ಇದೀಗ ಆಸಕ್ತ ಯುವಜನರಿಗೆ ಉಚಿತ ತರಬೇತಿ ನೀಡಲು ಪ್ರಸಾದ್ ಮುಂದೆಜ್ಜೆ ಇಟ್ಟಿದ್ದಾರೆ. ಜಲಸ್ತಂಭನ ವಿದ್ಯೆಯ ಬಗ್ಗೆ ಮಹಾಭಾರತದಲ್ಲಿ ಕೂಡ ಉಲ್ಲೇಖವಿದ್ದು, ಇದೊಂದು ಜೀವರಕ್ಷಣಾ ಕಲೆಯಾಗಿದೆ. ನಮ್ಮ ಪರಂಪರೆ ಉಳಿಸಿರುವ ಬಹುದೊಡ್ಡ ಕಲೆಯಾಗಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಗ್ಯಾರಂಟಿ ಗೆಲುವನ್ನು ಮಾರ್ಕೆಟಿಂಗ್ ಮಾಡಿಕೊಳ್ಳಬೇಕೇ ಸರ್ಕಾರ?
ದುರ್ಯೋಧನ ಪಾಂಡವರಿಂದ ತಪ್ಪಿಸಿಕೊಂಡು ವೈಶಂಪಾಯನ ಸರೋವರದ ತಳದಲ್ಲಿ ಕುಳಿತಿದ್ದಿದ್ದು ಕೂಡ ಇದೇ ವಿದ್ಯೆಯ ಬಲದಿಂದಲೇ. ನೀರಿನ ಮೇಲೆ ತೇಲುವುದು ಸುಲಭವಲ್ಲ. ಅಭ್ಯಾಸ ಬೇಕೇ ಬೇಕು. ಗುರು ಮುಖೇನ ಈ ವಿದ್ಯೆ ಕಲಿತರೆ ಯಶಸ್ವಿಯಾಗಿ ಕಲಿಯಬಹುದು. ಎಂತಹುದೇ ಜಲಗಂಡಾಂತರ ಎದುರಾದಾಗಲೂ ಭಯವಿಲ್ಲದೆ ತಮ್ಮ ಜೀವ ಉಳಿಸಿಕೊಳ್ಳಬಹುದು. ಆದ್ದರಿಂದ, ಈ ವಿದ್ಯೆ ಕಲಿಯಲು ಆಸಕ್ತಿಯುಳ್ಳ ಯುವಜನರು ಬಿಎಸ್ ಪ್ರಸಾದ್ ಮೊಬೈಲ್ ಸಂಖ್ಯೆ(9994812479)ಗೆ ಸಂಪರ್ಕಿಸಬಹುದು.
ಕೆರೆಕುಂಟೆ ಬಾವಿಗಳು ಬತ್ತಿರುವ ಈ ಸಂದರ್ಭದಲ್ಲಿ ಜಲಸ್ತಂಬನ ವಿದ್ಯೆ ಕಲಿಸುವುದು ಸಾಹಸವೇ ಸರಿ. ಆದರೂ ಯಾವುದಾದರೂ ಸಂಘ ಸಂಸ್ಥೆಗಳು, ದಾನಿಗಳು ಮುಂದೆ ಬಂದು ಈಜು ಕೊಳದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಿಕೊಟ್ಟು ಈ ಕಲೆಗೆ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಉಚಿತವಾಗಿ ನಾನು ಈ ಕಲೆಯನ್ನು ಯುವ ಸಮುದಾಯಕ್ಕೆ ಪ್ರತಿಫಲಾಪೇಕ್ಷೆಯಿಲ್ಲದೆ ಕಲಿಸಲು ಸಿದ್ಧ.
– ಬಿ ಎಸ್ ಪ್ರಸಾದ್