ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾಡೋಜ ಡಾ.ಜಿ. ನಾರಾಯಣ ಅವರ ಸ್ಮರಣಾರ್ಥ ಜೂನ್ 15 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನಪದ ಕಲಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಡೋಜ ಡಾ.ಜಿ.ನಾರಯಣ ಪ್ರತಿಷ್ಠಾನದ ಅಧ್ಯಕ್ಷ ಜಿ.ನಾ.ಗೋಪಾಲಕೃಷ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡೋಜ ಡಾ.ಜಿ.ನಾರಯಣ ಅವರು ಮಹಾಪೌರರಾಗಿ, ಕಸಾಪ ಅಧ್ಯಕ್ಷರಾಗಿ ಜನಪದ ಕಲೆಗಳ ಉಳಿವಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಇದರ ಪರಿಣಾಮ ಪ್ರಸ್ತುತ ಜಾನಪದ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಿದೆ ಎಂದು ಹೇಳಿದರು.
ಜಾನಪದ ಕಲೆಗಳಿಗೆ ಮತ್ತಷ್ಟು ಪ್ರೋತ್ಸಾಹ ದೊರಕಿಸಿಕೊಡುವ ನಿಟ್ಟಿನಲ್ಲಿ ನಾಡೋಜ ಡಾ.ಜಿ.ನಾರಾಯಣ ಪ್ರತಿಷ್ಠಾನ, ಭಾರತೀಯ ಕನ್ನಡ ಪ್ರತಿಷ್ಠಾನ ಮತ್ತು ಸುವರ್ಣ ಜ್ಯೋತಿ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ದಾಖಲೆಯ ರಾಜ್ಯಮಟ್ಟದ ಜನಪದ ಕಲಾ ಮಹೋತ್ಸವವನ್ನು ಆಯೋಜಿಸಲಾಗಿದ್ದು, ವಿಶ್ವ ದಾಖಲೆ ಮಾಡಲು ಯೋಜಿಸಲಾಗಿದೆ. ಈ ಕಲಾ ಸ್ಪರ್ಧೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಲಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಲಾ ತಂಡಗಳ ನೋಂದಣಿ ಕಡ್ಡಾಯವಾಗಿದ್ದು, ವಾಟ್ಸಾಪ್ ಸಂಖ್ಯೆಗೆ ಕಲಾ ಪ್ರದರ್ಶನದ 5 ನಿಮಿಷದ ವಿಡಿಯೋ ತುಣುಕನ್ನು ಕೂಡಲೇ ಕಳಿಸಿಕೊಡಬೇಕು. ವರ್ಲ್ಡ್ ಬುಕ್ ಅಫ್ ರೆಕಾರ್ಡ್ಸ್, ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ಡ್ಯಾನ್ಸ್ ರೆಕಾರ್ಡ್ಸ್ ಒಪ್ಪಿಗೆಯಂತೆ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.
ಮೊದಲ ಬಹುಮಾನವಾಗಿ 1 ಲಕ್ಷ, ಎರಡನೇ ಬಹುಮಾನವಾಗಿ 75 ಸಾವಿರ, ಮೂರನೇ ಬಹುಮಾನವಾಗಿ 50 ಸಾವಿರ, ಪ್ರೋತ್ಸಾಹಕ ಬಹುಮಾನವಾಗಿ ಹತ್ತು ತಂಡಗಳಿಗೆ ಹತ್ತು ಸಾವಿರ ನೀಡಲಾಗುವುದು ಎಂದು ತಿಳಿಸಿದರು.
ನಾಡೋಜ ಡಾ.ಜಿ.ನಾರಾಯಣ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಮುನಿ ವೆಂಕಟಸ್ವಾಮಿ ಮಾತನಾಡಿ, ಡೊಳ್ಳು ಕುಣಿತ, ವೀರಗಾಸೆ, ಪುರವಂತಿಕೆ, ಲಿಂಗದಬೀರರು, ಪಟದ ಕುಣಿತ, ಪೂಜಾ ಕುಣಿತ, ಬೀಸು ಕಂಸಾಳೆ, ಹೆಜ್ಜೆ ಮೇಳ, ಗೊರವರ ಕುಣಿತ, ಕಂಗೀಲು ಕುಣಿತ, ಕೋಲಾಟ, ಜೋಗತಿ ಮೇಳ ಮಾಡುವ ರಾಜ್ಯದ ಯಾವುದೇ ಕಲಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ನೋಂದಣಿ ಸಂಪೂರ್ಣ ಉಚಿತವಾಗಿದ್ದು, ಆಸಕ್ತ ತಂಡಗಳು ಮೊ.ಸಂಖ್ಯೆ: 9481783344, 9341224368, 9922436974 ಈ ಸಂಖ್ಯೆಗಳಿಗೆ ಕರೆ ಮಾಡಿ ಏ.25 ರಿಂದ ಮೇ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಶ್ರೇಯಸ್ ಹಾಗೂ ರಮೇಶ್ ಹಾಜರಿದ್ದರು.