ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಸೆಪ್ಟೆಂಬರ 30ರಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಇಲಾಖಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸೂಚನೇ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆ.೨೯, ಶುಕ್ರವಾರದಂದು, ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಸಿದ್ಧತೆಗಳ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಈಗಾಗಲೇ ಕಾರ್ಯಕ್ರಮದ ಕುರಿತಂತೆ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಲಾಗಿದೆ. ಎಲ್ಲ ಇಲಾಖಾ ಅಧಿಕಾರಿಗಳು ಖುದ್ದು ಹಾಜರಿದ್ದು ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂದು ಕರೆಕೊಟ್ಟಿದ್ದಾರೆ.
ಅಧಿಕಾರಿಗಳು ಕ್ರಿಯಾಶೀಲರಾಗಿ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂಧಿಸುವ ಮೂಲಕ ಸ್ಥಳದಲ್ಲಿಯೇ ಪರಿಹಾರ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂಧಿಸಬೇಕು ಎಂದಿದ್ದಾರೆ.
ಅಹವಾಲುಗಳ ಸ್ವೀಕೃತಿಗಾಗಿ ಜಿಲ್ಲಾಡಳಿತ ಭವನದಲ್ಲಿ ತಾಲೂಕುವಾರು ಪ್ರತ್ಯೇಕ ಕೌಂಟರಗಳನ್ನು ತೆರೆಯಲಾಗಿದ್ದು. ತಾಲೂಕುವಾರು ಅರ್ಜಿಗಳ ಸ್ವೀಕೃತಿಗಾಗಿ ನಿಯೋಜಿಸಲಾದ ಅಧಿಕಾರಿ ಮತ್ತು ಸಿಬ್ಬಂದಿ, ಅಹವಾಲು ಸಲ್ಲಿಸಲು ಆಗಮಿಸಿದ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು. ಅಲ್ಲದೆ, ಸ್ವೀಕೃತವಾದಂತಹ ಅಹವಾಲುಗಳಿಗೆ ಸಾಧ್ಯವಿದ್ದಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ತಾಲೂಕುಗಳಿಂದ ತಹಶೀಲ್ದಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮಾತ್ರ ಕಡ್ಡಾಯವಾಗಿ ಆಗಮಿಸಬೇಕು. ಉಳಿದಂತೆ, ಇತರೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿಯೇ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮಟ್ಟದ ಎಲ್ಲ ಇಲಾಖಾ ಮುಖ್ಯಸ್ಥರು ಜನತಾ ದರ್ಶನ ಕಾರ್ಯಕ್ರಮ ಮುಕ್ತಾಯವಾಗುವವರೆಗೆ ಕಡ್ಡಾಯವಾಗಿ ಹಾಜರಿರಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸಭೆಯಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಸೇರಿಂದತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.