ರಾಜ್ಯ ಸರ್ಕಾರ ಆಡಳಿತದಲ್ಲಿ ಪ್ರಭುತ್ವ ತಂದಿದೆ. ಜನರ ಮನೆ ಬಾಗಿಲಿಗೆ ಆಡಳಿತ ತೆಗೆದುಕೊಂಡು ಹೋಗುವ ಇಚ್ಛಾಶಕ್ತಿ ಹೊಂದಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ ಪಾಟೀಲ್ ಹೇಳಿದರು.
ಮುಂಡರಗಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಜನಪ್ರತಿನಿಧಿಗಳ ದರ್ಪದ ಪರಿಕಲ್ಪನೆ ಬದಲಾಯಿಸಿ ಹೊಸ ಆಡಳಿತ ರೂಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿ ಮಾಡುತ್ತಿದೆ” ಎಂದರು.
“ಕಟ್ಟಕಡೆಯ ಅರ್ಜಿದಾರನ ಮನವಿ ಸ್ವೀಕರಿಸುವ ವರೆಗೂ ಜನತಾ ದರ್ಶನ ನಿಲ್ಲಿಸುವುದಿಲ್ಲ. ಅರ್ಜಿದಾರರೂ ತಾಳ್ಮೆಯಿಂದ ತಮ್ಮ ಮನವಿ ಸಲ್ಲಿಸಬೇಕು. ಇದೊಂದು ಪ್ರಜಾಪ್ರಭುತ್ವದಲ್ಲಿ ದೊಡ್ಡ ಪ್ರಯೋಗವಾಗಿದೆ” ಎಂದರು.
75 ವರ್ಷದ ನಂತರವೂ ನಮ್ಮ ಶೌಚಾಲಯಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಆಡಳಿತ ವ್ಯವಸ್ಥೆ ಇದೆ. ತಾತ್ಸಾರ ಮನೋಭಾವ ಆಡಳಿತ ವ್ಯವಸ್ಥೆ ಜಡಗಟ್ಟಿದೆ. ಆದರೆ ಇನ್ಮುಂದೆ ಜಡತ್ವವನ್ನು ನಿವಾರಿಸುತ್ತಿದ್ದೆವೆ. ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಿ ಜನರ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಸಚಿವರು ಹೇಳಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಭಾಗಶಃ ಎಲ್ಲ ಅರ್ಜಿಗಳನ್ನು ಸ್ವೀಕರಿಸಿ ಪರಿಹರಿಸಿದ್ದೇವೆ. ಜನತಾ ದರ್ಶನದಲ್ಲಿ ಸಲ್ಲಿಕೆ ಆಗಿದ್ದ 921 ಅರ್ಜಿಗಳಲ್ಲಿ 171 ಅರ್ಜಿಗಳನ್ನು ತಿರಸ್ಕರಿಸಿದ್ದೇವೆ. 171 ಅರ್ಜಿದಾರರು ಸೌಕರ್ಯ ಹೊಂದಿದವರಾಗಿ, ತೆರಿಗೆ ತುಂಬುವರಾಗಿದ್ದು ಅವರ ಅರ್ಜಿಗಳನ್ನು ತಿರಸ್ಕರಿಸಿದ್ದೇವೆ. ನ್ಯಾಯಯುತ ಅರ್ಜಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲು ಬದ್ಧತೆ ನಮ್ಮ ಸರ್ಕಾರಕ್ಕಿದೆ ಎಂದರು.
ಇಂದು ನಡೆಯುವ ಜನತಾ ದರ್ಶನದಲ್ಲಿ ಫೆ. 28 ರ ಒಳಗಾಗಿ ಎಲ್ಲ ಅರ್ಜಿಗಳಿಗೆ ಪರಿಹಾರ ನೀಡುವ ಗುರಿಯನ್ನು ಜಿಲ್ಲಾಡಳಿತ ಹೊಂದಬೇಕು ಎಂದರು.
ಈಗ ಆಡಳಿತದ ವೈಖರಿ ಬದಲಾಗಿದೆ. ಈ ಮೊದಲು ಕೇಂದ್ರದಿಂದ ಗ್ರಾಮದ ಅಭಿವೃದ್ಧಿಗೆ 1 ರೂ. ಬಿಡುಗಡೆ ಆದರೆ ಗ್ರಾಮಕ್ಕೆ ಬರುವಷ್ಟರಲ್ಲಿ 16 ಪೈಸೆ ಬಂದು ಮುಟ್ಟುತ್ತಿತ್ತು. ಪ್ರತಿ ಆಡಳಿತ ವ್ಯವಸ್ಥೆಯಲ್ಲಿ ಲಂಚ ನೀಡಬೇಕಾದ ಅನಿವಾರ್ಯತೆ ಇತ್ತು. ಆದರೆ, ಈಗ ವ್ಯವಸ್ಥೆ ಪಾರದರ್ಶಕ ಆಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ಮಹಿಳಾ ಫಲಾನುಭವಿಗಳಿಗೆ ತಲಾ 2 ಸಾವಿರದಂತೆ 42 ಕೋಟಿ ವಿತರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲಿಯೂ ಲಂಚ ನೀಡುವ ಪ್ರಸಂಗ ಬಂದಿದೆಯಾ? ಎಂದು ಸಚಿವರು ಪ್ರಶ್ನಿಸಿದರು. ಸರ್ಕಾರದ ಸಹಾಯಧನ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಸರ್ಕಾರದ ಆಧ್ಯತೆ ಬಡವರು ಮತ್ತು ಬಡವರ ಅಭಿವೃದ್ಧಿಗೆ ಶ್ರಮವಹಿಸುವುದು ಎಂದು ಸಚಿವರು ಹೇಳಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ರಾಜ್ಯದಲ್ಲಿ 1 ಕೋಟಿಗೂ ಅಧಿಕ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದೇವೆ. ಪ್ರಭುವಿನತ್ತ ಪ್ರಭುತ್ವ ತೆಗೆದುಕೊಂಡು ಹೋಗಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಭು ಎಂದರೇ ಪ್ರಜೆಗಳು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ,ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ತಹಶಿಲ್ದಾರರ ದನಂಜಯ ಸೇರಿದಂತೆ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಇತರರು ಇದ್ದರು.