ಧರ್ಮಸ್ಥಳದ ನೇತ್ರಾವತಿ ನದಿ ಪರಿಸರದಲ್ಲಿ ಅಕ್ರಮವಾಗಿ ಮಾನವ ದೇಹಗಳನ್ನು ಹೂಳಲಾಗಿದೆ ಎಂಬ ದೂರು ಆಧರಿಸಿ ತನಿಖೆ ನಡೆಯುತ್ತಿರುವ ನಡುವೆಯೇ ಧರ್ಮಸ್ಥಳದಲ್ಲಿ ಅಪ್ರಾಪ್ತೆ ಮೃತದೇಹವನ್ನು ಪೊಲೀಸರು ಕಾನೂನುಬಾಹಿರವಾಗಿ ಹೂತಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ಸಾಮಾಜಿಕ ಹೋರಾಟಗಾರ ಜಯಂತ್ ಟಿ ಎಂಬ ದೂರುದಾರರು ಎಸ್.ಐ.ಟಿ ಅಧಿಕಾರಿಗಳ ಸೂಚನೆಯಂತೆ ಸೋಮವಾರ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ದೂರು ನೀಡಿದ್ದಾರೆ.
2002 ಮತ್ತು 2003ರ ಅವಧಿಯಲ್ಲಿ ಸುಮಾರು 13ರಿಂದ 15 ವರ್ಷದ ಹೆಣ್ಣು ಮಗುವಿನ ಮೃತದೇಹ ರಾಜ್ಯ ಹೆದ್ದಾರಿ 37ರ ರಸ್ತೆ ಬದಿಯ ಅರಣ್ಯದಲ್ಲಿ ಎಸೆದು ಹೋಗಿದ್ದಾರೆ ಎಂದು ಸ್ಥಳೀಯ ನಿವಾಸಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿರುವ ಪೊಲೀಸ್ ಅಧಿಕಾರಿಯವರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಮಾಹಿತಿ ಪಡೆದು ಒಂದು ವಾರದ ನಂತರ ಆಟೋದಲ್ಲಿ ಸುಮಾರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿ ಫೋಟೋ ತೆಗೆದಿದ್ದಾರೆ. ನಂತರ ಸ್ಥಳೀಯರಿಗೆ ಇದು ಸುಮಾರು 35-40 ವರ್ಷದ ಹೆಂಗಸು. ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅದಾದ ಬಳಿಕ 1ರಿಂದ 2 ಫೀನ್ ಆಳದ ಹೊಂಡ ತೋಡಿ ಹೆಣ್ಣು ಮಗಳ ಮೃತದೇಹ ಸಿಕ್ಕಿದ ತಕ್ಷಣ ಕಾನೂನು ಚೌಕಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? BIG BREAKING: ಧರ್ಮಸ್ಥಳ ಕೇಸ್‌ನಲ್ಲಿ ಮತ್ತೊಬ್ಬ ದೂರುದಾರ ಎಸ್‌ಐಟಿ ಮುಂದೆ ಹಾಜರು; ಮಹತ್ವದ ತಿರುವು
“ಅರಣ್ಯ ಪ್ರದೇಶದಲ್ಲಿದ್ದ ಮೃತದೇಹದ ಮಾಹಿತಿಯನ್ನು ಸ್ಥಳೀಯರು ನೀಡಿದ ತಕ್ಷಣದಲ್ಲಿ ಸ್ಥಳಕ್ಕೆ ಭೇಟಿ ನೀಡದೆ ಒಂದು ವಾರದ ನಂತರ ಬಂದು ಮೃತ ದೇಹ ಸಿಕ್ಕಿದ ಸ್ಥಳದಲ್ಲಿ ಮಣ್ಣು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳನ್ನೂ ದಾಖಲಿಸಿಕೊಂಡಿಲ್ಲ. ಮೃತದೇಹ ಸಿಕ್ಕಿದ ಸ್ಥಳದ ಮಹಜರೂ ಮಾಡಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆಯೂ ನಡೆದಿಲ್ಲ. ಅರಣ್ಯದಲ್ಲಿ ಮೃತ ದೇಹ ಸಿಕ್ಕ ಬಗ್ಗೆ ಅರಣ್ಯ ಇಲಾಖೆಯವರಿಗೂ ಮಾಹಿತಿಯನ್ನು ನೀಡಿಲ್ಲ” ಎಂದು ಜಯಂತ್ ಟಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

“ಈ ಎಲ್ಲಾ ಕೃತ್ಯಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಅಂದಿನ ಸಮಯದಲ್ಲಿ ನಾನು ಭಯ ಮತ್ತು ಆಘಾತದಿಂದಾಗಿ ಈ ವಿಷಯವನ್ನು ಯಾರಿಗೂ ತಿಳಿಸಲು ಧೈರ್ಯ ಮಾಡಿರಲಿಲ್ಲ. ಆದರೆ ಇಂದು ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತಂಡದ ಮೇಲೆ ನಂಬಿಕೆಯಿಟ್ಟು ದೂರು ನೀಡುತ್ತಿದ್ದೇನೆ. ಪ್ರಕರಣದ ತನಿಖೆಯ ಸಮಯದಲ್ಲಿ ಅಗತ್ಯ ಬಿದ್ದರೆ ಇದಕ್ಕೆ ಸಾಕ್ಷಿಯಾಗಿರುವವರನ್ನು ಹಾಜರುಪಡಿಸುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ” ಎಂದು ಜಯಂತ್ ಟಿ ಎಸ್‌ಐಟಿ ತಂಡಕ್ಕೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ದೂರಿಗೆ ಪ್ರತಿಕ್ರಿಯಿಸಿರುವ ಎಸ್ಐಟಿ ತಂಡ ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ, ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
