ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸರಿಯಾಗಿ ಗ್ರಾಮ ಪಂಚಾಯತಿಗೆ ಬರುತ್ತಿಲ್ಲ. ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ, ಪಂಚಾಯತಿ ಸದಸ್ಯೆಯೊಬ್ಬರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಘಟನೆ ನಡೆದಿದೆ.
ಸೊನ್ನ ಗ್ರಾಮ ಪಂಚಾಯತಿಯ ಪಿಡಿಒ ಸಲೀಮ್ ಪಟೇಲ ಅವರು ಕಳೆದ ತಿಂಗಳು ಸರಿಯಾಗಿ ಪಂಚಾಯತಿಗೆ ಬಂದಿಲ್ಲ. ಪರಿಣಾಮವಾಗಿ, ಪಂಚಾಯತಿಯ ಕಲಸಗಳನ್ನು ಬಾಕಿ ಉಳಿದಿವೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಸಾಬಮ್ಮ ಮಲ್ಲಪ್ಪ ಹೆಗಡಿ ಆರೋಪಿಸಿದ್ದಾರೆ. ಪಂಚಾಯತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ, ಆಸ್ತಿ ನೊಂದಣಿ, ರಸ್ತೆ, ಚರಂಡಿ, ಸ್ವಚ್ಚತೆ ಸೇರಿದಂತೆ ನಾನಾ ಸಮಸ್ಯೆಗಳಿವೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಿದ್ದಾರೆ. ಆದರೆ, ಪಿಡಿಒ ಸರಿಯಾಗಿ ಕಚೇರಿಗೆ ಬಾರದ ಕಾರಣ, ಸಮಸ್ಯೆಗಳಿಗೆ ಪರಿಹಾರ ದೊರೆಯದಂತಾಗಿದೆ” ಎಂದು ಸಾಬಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಜೂನ್-ಜುಲೈ ತಿಂಗಳಿನಲ್ಲಿ ಪಿಡಿಒ ಸರಿಯಾಗಿ ಕಚೇರಿಗೆ ಬಂದಿಲ್ಲ. ಫೋನ್ ಮೂಲಕ ಸಂಪರ್ಕಿಸಿದರೂ, ಸಂಪರ್ಕಕ್ಕೆ ಸಿಗುತಿಲ್ಲ. ತಾಲೂ(ಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಡಿಒ ಕಾರ್ಯವೈಖರಿ ವಿರುದ್ದ ಜಿಲ್ಲಾ ಪಂಚಾಯತಿ ಸಿಇಒ ಭನ್ವರಸಿಂಗ್ ಮೀನಾ ಅವರಿಗೂ ದೂರು ನೀಡಲು ನಿರ್ಧರಿಸಿದ್ದೇವೆ” ಎಂದು ಹೇಳಿರುವುದಾಗಿ ಪ್ರಜಾವಾಣಿ ವರದಿ ಮಾಡಿದೆ.