ಜಿಂದಾಲ್ ಕಂಪನಿಗೆ ಸರ್ಕಾರದ ಭೂಮಿ ಮಾರಾಟ ಮಾಡುತ್ತಿರುವುದು ಜೀವವಿರೋಧಿ ನಿರ್ಧಾರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿಕಾರಿದರು.
ಕಾಂಗ್ರೆಸ್ ಮುಖಂಡ ಕೊಂಡಯ್ಯ ಅವರು ಜಿಂದಾಲ್ ಉಕ್ಕು ಕಂಪನಿಗೆ ಭೂಮಿ ಮಾರಾಟ ಮಾಡುತ್ತಿರುವುದು ನ್ಯಾಯಕ್ಕೆ ಸಿಕ್ಕ ಜಯ ಎಂದು ಹೇಳಿಕೆ ಖಂಡಿಸಿ ಈದಿನ.ಕಾಮ್ ಜೊತೆ ಮಾತನಾಡಿ ಪ್ರತಿಕ್ರಿಯಿಸಿದ ಅವರು ʼಕೊಂಡಯ್ಯ ಹೇಳಿಕೆ ಜನವಿರೋಧಿಯಾಗಿದೆ. ರೈತರನ್ನು ಒಕ್ಕಲೆಬ್ಬಿಸಿ ಅರಣ್ಯ ನಾಶಗೊಳಿಸಿ ಪರಿಸರದ ಮೇಲೆ ಸಂಹಾರ ನಡೆಸುವ ಹುನ್ನಾರದ ಪರ ನಿಲ್ಲುವುದು ಖಂಡನೀಯʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಗಣಿಗಾರಿಕೆಯಿಂದ ಪರಿಸರ ನಾಶವಾಗಲಿದೆ. ಇದರಿಂದ ಜನಜೀವನಕ್ಕೆ ಅಪಾಯಕಾರಿಯಾಗಿದೆ. ಅರಣ್ಯ ಉಳಿಸಿಕೊಳ್ಳಲು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಸರ್ಕಾರ ಸಂಡೂರಿನ ಅರಣ್ಯ ಪ್ರದೇಶದ ಮೇಲೆ ವಕ್ರದೃಷ್ಟಿ ಬಿದ್ದಿರುವುದು ಭವಿಷ್ಯಕ್ಕೆ ಮಾರಕ ಎನ್ನುವಂತಿದೆʼ ಎಂದರು.
ʼಸಂಡೂರು ಜನರ ಭೂಮಿ ಕಸಿದು ರಿಯಲ್ ಎಸ್ಟೇಟ್ ದಂಧೆ ಮೂಲಕ ಲೂಟಿ ಹೊಡೆಯುವ ಹುನ್ನಾರವಿದೆ. ಜಿಂದಾಲ್ ಕಂಪನಿ ವಿರುದ್ಧ ಪರಿಸರವಾದಿಗಳು, ರೈತರು, ಕಾರ್ಮಿಕರು ಬೇಸತ್ತು ಹೋಗಿದ್ದಾರೆ. ಕಂಪನಿಯಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟು ಜನರು ಧೂಳಿನಲ್ಲಿ ಓಡಾಡುವಂತಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ. ಸರ್ಕಾರ ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ನಿರ್ಧಾರ ಕೂಡಲೇ ಹಿಂಪಡೆಯಬೇಕುʼ ಎಂದು ಆಗ್ರಹಿಸಿದರು.
