- ಹಾಸನ, ಚಿಕ್ಕಮಗಳೂರು ಜಿಲ್ಲೆಯ ನಿಯೋಗದಿಂದ ಅರಣ್ಯ ಸಚಿವರ ಭೇಟಿ
- ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಭರವಸೆ ನೀಡಿದ ಅರಣ್ಯ ಸಚಿವ
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಹಾಗೂ 1978ಕ್ಕೆ ಮೊದಲಿನಿಂದ ಸಾಗುವಳಿ ಮಾಡುತ್ತಿರುವ ಸಣ್ಣ ಹಿಡುವಳಿದಾರರ ಸಮಸ್ಯೆ ಪರಿಹರಿಸಲು ಜಂಟಿ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಹಾಸನ, ಚಿಕ್ಕಮಗಳೂರು ಭಾಗದ ಶಾಸಕರಾದ ಟಿ ಡಿ ರಾಜೇಗೌಡ, ಸಿಮೆಂಟ್ ಮಂಜು, ನಯನ ಮೋಟಮ್ಮ, ನಾಯಕರಾದ ಬಿ ಎಲ್ ಶಂಕರ್, ಎಚ್ ಎಂ ವಿಶ್ವನಾಥ್, ಮೋಟಮ್ಮ ಅವರನ್ನೊಳಗೊಂಡ ನಿಯೋಗವು ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ನೀಡಿದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
“ಅರಣ್ಯ ಭೂಮಿಯಲ್ಲಿ 5-6 ದಶಕಗಳಿಂದ ಕೃಷಿ ಮಾಡುತ್ತಿರುವ ಬಡ ರೈತರ ಸಮಸ್ಯೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ಅಗತ್ಯವಿದೆ” ಎಂದು ಹೇಳಿದರು.
ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮ
“ಸಕಲೇಶಪುರ ಮತ್ತು ಚಿಕ್ಕಮಗಳೂರಿನ ಅರಣ್ಯದ ಅಂಚಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿ 140ಕ್ಕೂ ಹೆಚ್ಚು ಆನೆಗಳಿವೆ. ಆನೆಗಳ ಹಿಂಡು ತೋಟಕ್ಕೆ ಬಂದರೆ ಬೆಳೆ ನಾಶವಾಗುತ್ತದೆ. ಜನ ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಎದುರಾಗಿದೆ” ಎಂದು ಬಿ ಎಲ್ ಶಂಕರ್, ವಿಶ್ವನಾಥ್ ಮತ್ತು ಮೋಟಮ್ಮ ವಿವರಿಸಿದರು.
“ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೋರಲಾಗುವುದು” ಎಂದು ಈಶ್ವರ ಖಂಡ್ರೆ ತಿಳಿಸಿದರು.
ಅರಣ್ಯದೊಳಗೆ ಹಣ್ಣಿನ ಗಿಡಗಳನ್ನು ಬೆಳೆಸಿ, 2 ಕಿ.ಮೀಗೆ ಒಂದರಂತೆ ಕೆರೆ, ಕಟ್ಟೆ ಕಟ್ಟಿಸಿದರೆ ಆನೆಗಳು ನಾಡಿಗೆ ಬರುವುದು ಕಡಿಮೆ ಆಗುತ್ತದೆ ಎಂದು ನಿಯೋಗದ ಸದಸ್ಯರು ಸಲಹೆ ನೀಡಿದರು. ಈ ಸಲಹೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಖಂಡ್ರೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅನ್ನ ಭಾಗ್ಯ | ರಾಜ್ಯದ ಜೋಳ, ರಾಗಿ, ಕುಚಲಕ್ಕಿ ಹಾಗೂ ಸಿರಿಧಾನ್ಯ ಖರೀದಿಸಿ ಹಂಚಿ: ರೈತ ಸಂಘಗಳ ಮನವಿ
ಕಚೇರಿ ಸ್ಥಳಾಂತರಕ್ಕೆ ಮನವಿ
“ಫಾರೆಸ್ಟ್ ಸೆಟಲ್ಮೆಂಟ್ ಅಧಿಕಾರಿಯ ಕಚೇರಿ ಕಡೂರಿನಲ್ಲಿದ್ದು, ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನ ಜನರು ಅಲ್ಲಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ವಾಸ್ತವವಾಗಿ ಕಡೂರಿನಲ್ಲಿ ಯಾವುದೇ ಅರಣ್ಯವಿಲ್ಲ. ಹೀಗಾಗಿ ಈ ಕಚೇರಿಯನ್ನು ಮೂಡಿಗೆರೆಗೆ ಅಥವಾ ಸಕಲೇಶಪುರಕ್ಕೆ ಸ್ಥಳಾಂತರಿಸಬೇಕು” ಎಂದು ಸಚಿವರಿಗೆ ಮನವಿ ಮಾಡಿದರು.
ಕಚೇರಿ ವರ್ಗಾವಣೆ ಬಗ್ಗೆ ವರದಿ ತರಿಸಿಕೊಂಡು ಕ್ರಮ ವಹಿಸುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.