ಉತ್ತರ ಕರ್ನಾಟಕದಲ್ಲಿ ಆಚರಿಸಲಾಗುವ ಪರಂಪರೆಯ ಜಾನಪದ ಹಬ್ಬಗಳಲ್ಲಿ ಜೋಕುಮಾರ ಸ್ವಾಮಿ ಹಬ್ಬವೂ ಒಂದು. ಬರಗಾಲದ ಬೇಸಿಗೆ ಸಮಯದಲ್ಲಿ ಮಳೆಗಾಗಿ ಜೋಕುಮಾರನ ಮಣ್ಣಿನ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ, ಅವುಗಳನ್ನು ಜೋಕುಮಾರ ಸ್ವಾಮಿ ಬಗೆಹರಿಸುತ್ತಾನೆಂಬ ನಂಬಿಕೆ ಹಳ್ಳಿಗಳ ರೈತಾಪಿ ಜನರದ್ದು.
ಗಣೇಶ ಚತುರ್ಥಿ ನಂತರದ ಅಷ್ಟಮಿ ದಿನದಂದು ಜೋಕುಮಾರ ಸ್ವಾಮಿ ಹುಟ್ಟುತ್ತಾನೆ. ಹುಟ್ಟಿದ ಏಳು ದಿನಕ್ಕೆ ಜೋಕುಮಾರ ಸ್ವಾಮಿ ಸಾಯುತ್ತಾನೆ. ಬಡಿಗೇರ ಸಮುದಾಯದ ಕುಟುಂಬದದವರು ಕೆರಗೆ ಹೋಗಿ ಅರಲನ್ನು ತಂದು ಜೋಕುಮಾರ ಸ್ವಾಮಿಯ ಮೂರ್ತಿಯನ್ನು ತಯಾರು ಮಾಡುತ್ತಾರೆ. ಅಗಲ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ತೆರೆದ ಬಾಯಿ, ಚೂಪಾದ ಮೀಸೆಯುಳ್ಳ ಮೂರ್ತಿ ತಯಾರಿಸಿ ಬಾರಕೇರ ಸಮುದಾಯಕ್ಕೆ ಒಪ್ಪಿಸುತ್ತಾರೆ.
ಬಾರಕೇರ ಸಮುದಾಯದ ಮಹಿಳೆಯರು ಜೋಕುಮಾರಸ್ವಾಮಿ ಮೂರ್ತಿಗೆ ಕಿರೀಟದಂತೆ ಇರುವ ತಲೆಸುತ್ತು ಸುತ್ತಿ, ಹಣೆಗೆ ವಿಭೂತಿ, ಕುಂಕುಮ ಭೊಟ್ಟು ಇಟ್ಟು ಅಲಂಕಾರ ಮಾಡುತ್ತಾರೆ. ಬಿದಿರಿನ ಬುಟ್ಟಿಯಲ್ಲಿ ಬೇವಿನ ಎಲೆಗಳನ್ನು ಇಟ್ಟು, ಅದರ ನಡುವೆ ಅಲಂಕಾರಗೊಂಡ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಇಡುತ್ತಾರೆ.
ಇದೆಲ್ಲ ಮುಗಿದ ಮೇಲೆ ಬಾರಕೇರ ಸಮುದಾಯದ ಐವರು ಮಹಿಳೆಯರು ಜೋಕುಮಾರ ಸ್ವಾಮಿಯನ್ನು ಪೂಜಿಸುತ್ತಾರೆ. ಒಬ್ಬ ಮಹಿಳೆ ಜೋಕುಮಾರ ಸ್ವಾಮಿಯನ್ನು ಹೊತ್ತರೆ, ಒಬ್ಬರು ಕಾಡಿಗೆ ಮತ್ತು ಜೊಳದ ನುಚ್ಚು ಬುಟ್ಟಿಯನ್ನು ಹೊರುತ್ತಾರೆ. ಇನ್ನೂ ಮೂರು ಹಿರಿ ಮಹಿಳೆಯರು (ಅಮ್ಮ) ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡುತ್ತಾರೆ.
“ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆಗಳರಲ್ಲ ತುಂವಿ ಒಡ್ಡುಗಳೆಲ್ಲ ಒಡೆದಾವು”, “ಅಬ್ಬಬ್ಬಾ ಇವನ ಏನ ಡೌಲು – ಜೋಕುಮಾರ ಆಗ್ಯಾನ ಜೋಕುಮಾರ” ಹಾಡುಗಳನ್ನು ಹಾಡುತ್ತಾ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ರೈತರ ಮನೆಗಳಿಗೆ ಹೋಗಿ, ಬಾಗಿಲ ಮುಂದೆ ಇಟ್ಟು ಹಾಡುಗಳನ್ನು ಹಾಡುತ್ತಾರೆ.
ಜೋಕುಮಾರ ಸ್ವಾಮಿ ಮನೆಗೆ ಬಂದನೆಂದು ಜೋಳ, ಅಕ್ಕಿ, ರೊಟ್ಟಿ, ಮೆಣಸಿನಕಾಯಿ, ಉಪ್ಪು, ತರಕಾರಿ, ಹೊಲದಲ್ಲಿ ಬೆಳೆದ ಧಾನ್ಯಗಳನ್ನು ನೀಡುತ್ತಾರೆ. ಹೀಗೆ ನೀಡಿದವರಿಗೆ ಜೋಗಪ್ಪನ ಪ್ರಾಸಾದ ಜೋಳದ ನುಚ್ಚು, ಕಾಡಿಗೆ ಕೊಡುತ್ತಾರೆ. ಈ ಪ್ರಸಾದವನ್ನು ಊರಲ್ಲಿರುವ ಪ್ರತಿಯೊಬ್ಬ ರೈತನು ತಗೊಂಡು ತಮ್ಮ ಜಮೀನುಗಳಿಗೆ ಚೆಲ್ಲುತ್ತಾರೆ. ಹಾಗೆ ಚೆಲ್ಲಿದರೆ ಹೊಲದಲ್ಲಿ ಬೆಳೆದ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಕಾಡಿಗೆಯನ್ನು ದನಕರುಗಳಿಗೆ ಹಚ್ಚಿದರೆ ಚಿಕ್ಕಾಡಿ, ಉಣ್ಣೆ ಆಗುವುದಿಲ್ಲ ಎಂದೂ ಅವರು ನಂಬುತ್ತಾರೆ.
ಜೋಕುಮಾರ ಸ್ವಾಮಿಯನ್ನು ಹೊತ್ತ ಮಹಿಳೆಯರಿಗೆ ರೈತರು ನೀರನ್ನು ಹೂಯ್ಯೂತ್ತಾರೆ. ಇದರಿಂದ ಭೂಮಿಗೆ ಮಳೆ ಆಗುತ್ತದೆ ಎನ್ನುತ್ತಾರೆ ರೈತರು. ಏಳು ದಿನ ಜೋಕುಮಾರ ಸ್ವಾಮಿಯನ್ನು ಹೊತ್ತು ಊರೂರು, ರೈತರ ಮನೆಗಳಿಗೆ ತೆರಳಿ ಮೆರವಣಿಗೆ ನಡೆಯುತ್ತದೆ. ಏಳನೆಯ ದಿನಕ್ಕೆ ಜೋಕುಮಾರ ಸ್ವಾಮಿಯನ್ನು ದಲಿತರ ವಸತಿ ಪ್ರದೇಶದಲ್ಲಿ ಇಟ್ಟು, ಅವನ ಸುತ್ತ ಮುಳ್ಳುಕಂಟಿ ಹಾಕಿ ಮಹಿಳೆಯರು ಸುತ್ತುತ್ತಾರೆ. ಆಗ ಮಹಿಳೆಯರ ಸೆರಗು ಮುಳ್ಳಿಗೆ ಸಿಕ್ಕಿಕೊಂಡರೆ, ಜೋಕುಮಾರ ಸ್ವಾಮಿಯೇ ಎಳೆದಿದ್ದಾನೆ ಎಂದು ಆ ಮೂರ್ತಿಯನ್ನು ಹೊಡೆದು (ಸಾಯಿಸಿ) ಹಳ್ಳದಲ್ಲಿ ಮುಚ್ಚುತ್ತಾರೆ.
ಜೋಕುಮಾರ ಸ್ವಾಮಿ ಸತ್ತ ನಂತರ ಅಗಸ ಸಮುದಾಯದವರು ತಿಥಿ ಮಾಡಿ ಅಡುಗೆ ಮಾಡಿ ಊಟ ಮಾಡುವುದು ಸಂಪ್ತದಾಯವಾಗಿ ಬೆಳೆದು ಬಂದಿದೆ.