ಕಲಬುರಗಿ ನಗರದ ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರು ವಾಸಿಸುತ್ತಿರುವ ಗುಲಾಬ್‌ವಾಡಿ ಕಾಲೋನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಕೂಡಲೇ ದುರಸ್ತಿಗೊಳಿಸಬೇಕೆಂದು ಎಐಡಿಎಸ್‌ಒ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಕಲಬುರಗಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದರು.
ʼಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಶಾಲೆಯ ಕಟ್ಟಡದ ಮೇಲ್ಚಾವಣಿ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಶೌಚಾಲಯಗಳಿದ್ದರೂ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಅವು ಉಪಯೋಗಕ್ಕೆ ಬಾರದಂತಾಗಿವೆʼ ಎಂದು ದೂರಿದರು.
ʼಬಡ, ಕೂಲಿಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಕೋಣೆಗಳಿಲ್ಲ. ಕನಿಷ್ಠ ಸೌಕರ್ಯವಿಲ್ಲ ಮಳೆ ಬಂದರೆ ಸೋರುವುದು ಸಾಮಾನ್ಯ ಎನ್ನುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಭೇಟಿ ನೀಡಿ ಪರಿಶೀಲಿಸಿ, ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ಎಐಡಿಎಸ್ಓ ಕಲಬುರಗಿ ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ, ಜಿಲ್ಲಾ ಸಮಿತಿ ಸದಸ್ಯರಾದ ರಾಹುಲ್, ಯುವರಾಜ್, ದೇವರಾಜ್, ಸ್ಪೂರ್ತಿ ಹಾಗೂ ಸ್ಥಳೀಯ ನಿವಾಸಿಗಳಾದ ಲಕ್ಷ್ಮಿ, ಜಗದೇವಿ ಮತ್ತಿತರರಿದ್ದರು.
ಇದನ್ನೂ ಓದಿ : ಕಲಬುರಗಿ | ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಕೆ : ಫ್ರಿಕ್ವೆನ್ಸಿ ಕಡಿತಕ್ಕೆ ಗ್ರಾಮಸ್ಥರ ಒತ್ತಾಯ