ಉರಿ ಬಿಸಿಲಿನ ನಡುವೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶಹಾಬದ್ ತಾಲೂಕಿನ ಹೋನಗುಂಟ ಗ್ರಾಮ ಪಂಚಾಯತಿಯ ಜನರು ಕೆಲಸ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಎಐಡಿವೈಒ ಆಗ್ರಹಿಸಿದೆ.
ಕಲಬುರಗಿ ಜಿಲ್ಲೆಯ ಹೋನಗುಂಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದ ಪಿಡಿಒ ಅವರೊಂದಿಗೆ ಎಐಡಿವೈಒ ಕಾರ್ಯಕರ್ತರು ಚರ್ಚೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಎಐಡಿವೈಒ ಕಾರ್ಯದರ್ಶಿ ರಮೇಶ ದೇವಕರ್, ” ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಇದ್ದರೂ ಸಹ ಅವರಿಗೆ ಶುದ್ಧ ಕುಡಿಯುವ ನೀರಿನ ಹಾಗೂ ನೆರಳಿನ ವ್ಯವಸ್ಥೆ ಇಲ್ಲ. ಹೋನುಗುಂಟ ಗ್ರಾಮದಿಂದ ಕೆಲಸ ನಡೆಯುವ ಸ್ಥಳಕ್ಕೆ ಐದು ಕಿಲೋಮೀಟರ್ ದೂರವಿದ್ದರೂ ವಾಹನ ವ್ಯವಸ್ಥೆ ಇಲ್ಲ. ಕಾರ್ಮಿಕರೇ ತಮ್ಮ ಸ್ವಂತ ಖರ್ಚಿನಲ್ಲಿ ಬಾಡಿಗೆ ವಾಹನ ಮಾಡಿಕೊಂಡು ಕೆಲಸಕ್ಕೆ ಹೋಗುತ್ತಾರೆ. ಕೆಲವೊಮ್ಮೆ ಯಾವುದೇ ವಾಹನ ಸಿಗದಿದ್ದರೆ ಕೆಲಸವನ್ನು ಮುಗಿಸಿಕೊಂಡು ಉರಿಬಿಸಿಲಿನಲ್ಲಿ ನಡೆದುಕೊಂಡು ಬರುವ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೂಡಲೇ ಮನರೇಗಾ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮತ್ತು ವಾಹನದ ವ್ಯವಸ್ಥೆಯನ್ನು ಕಲ್ಪಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಡಿವೈಓ ದೇವರಾಜ್ ರಾಜೋಳ್,ದೇವರಾಜ ಮೀರಲಕರ್ ಎಐಡಿವೈಒ, ಬಾಬು ಕಿಂಡ್ರೆ, ಅಜಯ್ ಗುರುಜಲ್ಕರ್, ಭೀಮು, ಲಕ್ಷ್ಮಿ ಇದ್ದರು.