ಕಲಬುರಗಿ ತಾಲ್ಲೂಕಿನ ಹಾಗರಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಬಾಣಿ ಅವರು ₹60 ಲಕ್ಷ ಅನುದಾನ ಲೂಟಿ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʼ2022-23ನೇ ಸಾಲಿನಲ್ಲಿ ಪಿಡಿಒ ಮಂಜುಳಾ ಅವರು ಅಂಗವಿಕಲರ ನಿಧಿ, 14 ಮತ್ತು 15ನೇ ಹಣಕಾಸಿನ ಅನುದಾನ ಸುಮಾರು ₹60 ಲಕ್ಷವನ್ನು ಕಾಮಗಾರಿ ಮಾಡದೇ ಲೂಟಿ ಮಾಡಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ಸಲ್ಲಿಸಿದ್ದರುʼ ಎಂದರು.
ದೂರಿನಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ವಿಚಾರಣೆ ವರದಿ ತರಿಸಿಕೊಂಡು ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕಾ ಪಂಚಾಯಿತಿ ಇಒ ಅವರಿಗೆ ಆದೇಶಿಸುತ್ತಾರೆ. ಆದರೆ, ಕ್ರಮ ಜರುಗಿಸದ ಇಒ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗಿದೆ. ಅವರು ಕ್ರಮಕ್ಕೆ ಸಿಇಒ ಅವರಿಗೆ ನಿರ್ದೇಶನ ನೀಡಿದ್ದಾರೆʼ ಎಂದರು.
ʼಕಾರಣ ಕೇಳಿ ನೋಟಿಸ್ ಬಂದ ತಕ್ಷಣ ಇಒ ಅವರು ವಿಶ್ವವಿದ್ಯಾಲಯ ಠಾಣೆಯಲ್ಲಿ ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ದೂರು ಕೊಟ್ಟಿದ್ದಾರೆ. ಆದರೆ, ಈವರೆಗೆ ಪ್ರಕರಣ ದಾಖಲಾಗಿಲ್ಲ. ಪಿಡಿಒ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ತಾಲೂಕು ಪಂಚಾಯತ್ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಮುಂಗಾರು ಮಳೆ : 36 ಮನೆಗಳಿಗೆ ಹಾನಿ, ಇಬ್ಬರ ಸಾವು
ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ತಾಲ್ಲೂಕು ಸಂಚಾಲಕ ಮಹೇಶ ಕೋಕಿಲೆ ಇದ್ದರು.