ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೆಬ್ಬಾಳ ಚಿಂಚೋಳಿ ಗ್ರಾಮದ ಮುಖ್ಯ ಹೆದ್ದಾರಿ ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಈ ರಸ್ತೆಯು ಹಾಗರಗಾ, ಖಾಜಕೋಟನೂರ್, ಹಳೆಹೆಬ್ಬಾಳ್, ಹೊಸಹೆಬ್ಬಾಳ್, ಹೆಬ್ಬಾಳ್ ಚಿಂಚೋಳಿ, ಕಾಳಗಿ ತಾಲೂಕಿನವರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿಯಾಗಿದೆ. ರಸ್ತೆಯುದ್ದಕ್ಕೂ ತಗ್ಗು ಗುಂಡಿಗಳು ಇರುವ ಕಾರಣ ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವಂತಾಗಿದೆ.
“ಗ್ರಾಮಸ್ಥರು, ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಎದುರಾಗುತ್ತದೆ. ರಸ್ತೆ ದುರಸ್ತಿ ಕಾಣದೆ ಸುಮಾರು ವರ್ಷಗಳೇ ಕಳೆದಿವೆ. ರಸ್ತೆ ಅವ್ಯವಸ್ಥೆ ಕುರಿತು ಶಾಸಕರಿಗೆ ಹಲವುಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೊಜನವಾಗಿಲ್ಲ” ಎಂದು ಗ್ರಾಮಸ್ಥರು ದೂರಿದಾರೆ.
“ಈ ರಸ್ತೆಯಲ್ಲಿ ವಾಹನ ನಡೆಸುವ ಚಾಲಕರು ಹಿಡಿಶಾಪ ಹಾಕುತ್ತಾರೆ. ಎರಡ್ಮೂರು ದಿನಗಳಿಂದ ಮಳೆ ಬರುತ್ತಿರುವುದರಿಂದ ರಸ್ತೆಪೂರ್ತಿ ಕೆಸರು ಗದ್ದೆಯಂತಾಗಿದ್ದು, ಪಾದಚಾರಿಗಳು ಸಂಚರಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ರಸ್ತೆ ದುರಸ್ತಿ ಮಾಡದಿರುವ ಬಗ್ಗೆ ಸಾರ್ವಜನಿಕರು ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂದಪಟ್ಟ ಅಧಿಕಾರಿಗಾಳು ಕೂಡಲೇ ಈ ರಸ್ತೆ ದುರಸ್ತಿ ಕೆಲಸ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.

ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಯುವ ಘಟಕದ ಅಧ್ಯಕ್ಷ ಅರ್ಜುನ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ರಸ್ತೆ ಹದಗೆಟ್ಟು ಸುಮಾರು ಆರು ವರ್ಷಗಳಾಗಿವೆ. ಸಂಬದಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿ ನಮಗೆ ಸಾಕಾಗಿಹೋಗಿದೆ, ಯಾವುದೇ ಪ್ರಾಯೋಜನವಾಗಿಲ್ಲ. ಹೆಬ್ಬಾಳ್ ಚಿಂಚೋಳಿಯಿಂದ ಸುಮಾರು ಐವತ್ತರವತ್ತು ಮಂದಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಈ ರಸ್ತೆ ಮೂಲಕ ಪಯಣ ಬೆಳೆಸುತ್ತಾರೆ. ಈ ರಸ್ತೆಯಲ್ಲಿ ಓಡಾಡಲು ತುಂಬಾನೆ ಕಷ್ಟವಿದೆ.
ಈಗಲಾದರೂ ಅಧಿಕಾರಿಗಳು, ಶಾಸಕರು ಎಚ್ಚೆತ್ತುಕೊಂಡು ನಮ್ಮ ಸಮಸ್ಯೆ ಬಗೆಹರಿಸುವತ್ತ ಗಮನಹರಿ, ರಸ್ತೆ ದುರಸ್ತಿ ಮಾಡಿಸಬೇಕು” ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ದತ್ತು ಸಜ್ಜನ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಳೆ ಬಂದರೆ ರಸ್ತೆಯ ಗುಂಡಿಗಳಲ್ಲಿ ರಸ್ತೆ ಮೇಲೆ ನೀರು ನಿಂತು ಕೆಸರು ಗದ್ದೆಯಂತ್ತಾಗುತ್ತದೆ. ವಾಹನ ಸವಾರರು ತುಂಬಾ ತೊಂದರೆಗಳನ್ನು ಎದುರಿಸುತ್ತಿದ್ದು, ಅನೇಕ ಬಾರಿ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿ ಕಾಲು ಕೈ ಮುರಿದುಕೊಂಡಿದ್ದಾರೆ. ಮಳೆಗಾಲದಲ್ಲಿ ಸರಿಯಾಗಿ ಬಸ್ ಬರುವುದಿಲ್ಲ. ಇದರಿಂದ ಗ್ರಾಮಸ್ಥರಿಗೆ, ಶಾಲೆ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆ ಎದುರಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಶಿವರಾಜಕುಮಾರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಲವು ಬಾರಿ ಮಾಧ್ಯಮಗಳಲ್ಲಿ ಸುದ್ದಿ ಮಾಡಿದರೂ ಅಧಿಕಾರಿಗಳು ಶಾಸಕರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೆಬ್ಬಾಳ ಚಿಂಚೋಳಿಯಿಂದ ಗೊಟ್ಟೂರು, ಕಾಳಗಿ ತಾಲೂಕಿನವರೆಗೆ ಮತ್ತು ಹೆಬ್ಬಾಳ್ ಚಿಂಚೋಳಿಯಿಂದ ಕಲಬುರಗಿಗೆ ಹೊಗುವವರೆಗೆ ಏಳೆಂಟು ಕಿಲೋಮೀಟರ್‌ವರೆಗೆ ಸಂಪೂರ್ಣ ರಸ್ತೆ ಹಾಳಾಗಿದೆ. ನನ್ನ ಸ್ವಂತ ಟ್ರಾಲಿಯಿದೆ. ಅದರ ಸಹಾಯದಿಂದ ರೋಗಿಗಳು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಏಳೆಂಟು ಕಿಲೋಮೀಟರ್ ದೂರ ಈ ರಸ್ತೆ ಮೂಲಕ ತಲುಪುವಷ್ಟರಲ್ಲಿ ಒಂದು ತಾಸು ಅಗುತ್ತೆ. ಅಷ್ಟರಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಅನೇಕ ಬಾರಿ ಅರ್ಜುನ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದರೂ ಅಧಿಕಾರಿಗಳು, ಶಾಸಕರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ” ಎಂದು ಆರೋಪಿಸಿದರು.
ಮಾರುತಿ ವಜರಗಾಂವ್ ಗ್ರಾಮಸ್ಥರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಳೆ ಬಂದರೆ ಬಸ್ ಸಂಚಾರ ಬಂದ್ ಅಗುತ್ತೆ. ಇದರಿಂದ ಶಾಲೆ ಕಾಲೇಜು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಹನುಮಾನ್ ದೇವಸ್ಥಾನದ ಹತ್ತಿರ ಓಡಾಡುವುದು ತುಂಬಾ ಕಷ್ಟವಾಗಿದೆ. ಬಸ್‌ಗಳು ಅಪ್ಪನ್ ಗುಡಿಯ ಕಡೆಯಿಂದ ಹೋಗುತ್ತವೆ. ನಮಗೆ ಬಹಳ ತೊಂದರೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಗಲು-ರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ನಿರತರಾದ ಬಿಬಿಎಂಪಿ ಅಧಿಕಾರಿಗಳು
ನಾಗಪ್ಪ ಮುದ್ದನ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಸ್ತೆ ನಿರ್ಮಾಣಗೊಂಡು ಹತ್ತು ವರ್ಷವಾಯಿತು. ಐದಾರು ವರ್ಷಗಳಿಂದ ರಸ್ತೆ ದುರಸ್ತಿ ಕಂಡಿಲ್ಲ. ರೋಡ್ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಮೊನ್ನೆ ಒಬ್ಬರು ದ್ವಿಚಕ್ರ ವಾಹನದಲ್ಲಿ ಬರುವಾಗ ಬಿದ್ದಿದ್ದಾರೆ. ಅಷ್ಟಾದರೂ ಅನಿವಾರ್ಯವಾಗಿ ಅದೇ ರಸ್ತೆಯಲ್ಲಿ ಓಡಾಡಬೇಕಾಗಿದೆ. ಚುನಾವಣೆ ಸಮಯದಲ್ಲಿ ವೋಟು ಹಾಕಿಸಿಕೊಳ್ಳಲು ಮಾತ್ರ ಬರುತ್ತಾರೆ. ವೋಟು ಹಾಕಿದ ಮೇಲೆ ಇತ್ತ ತಿರುಗಿಯೂ ನೋಡುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ರಂಗಮ್ಮ ಗ್ರಾಮಸ್ಥರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಸ್ತೆಯಲ್ಲಿ ಹಲವು ಬಾರಿ ಬಿದ್ದಿದ್ದೇವೆ. ರಸ್ತೆ ಹದಗೆಟ್ಟಿರುವ ಕಾರಣ ಬಸ್‌ಗಳು ಮಾರ್ಗ ಮಧ್ಯದಲ್ಲಿಯೇ ಕೆಟ್ಟುನಿಲುತ್ತವೆ. ಚುನಾವಣೆ ಸಂದರ್ಭದಲ್ಲಿ ಶಾಸಕರು ವೋಟು ಹಾಕಿ ಅಂತ ಮನೆಮನೆಗೆ ಬರುತ್ತಾರೆ. ವೋಟು ಪಡೆದ ಬಳಿಕ ವಾಪಸ್ ನಮ್ಮ ಸಮಸ್ಯೆಗಳನ್ನು ಅಲಿಸಲು ಬರುವುದಿಲ್ಲ” ಎಂದು ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಿದ್ದಾರೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.