ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಅಶೋಕ ನಗರ ಅಂಗನವಾಡಿ ಕೇಂದ್ರದ ಸಂಖ್ಯೆ ಎರಡರ ಕಾರ್ಯಕರ್ತೆಯೋರ್ವರು ಮೇಲ್ವಿಚಾರಕಿಯ ನಿಂದನೆ, ಒತ್ತಡ ತಾಳಲಾರದೆ ಮೂರ್ಛೆ ಹೋದ ಘಟನೆ ಗುರುವಾರ ಸಂಜೆ ನಡೆದಿದೆ.
ಅಂಗನವಾಡಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ವಾಟ್ಸಪ್ ಸಂದೇಶದ ವಿಚಾರವಾಗಿ ಮೇಲ್ವಿಚಾರಕಿ ಸಂಗಮ್ಮಾ ಪಾಟೀಲ, ಅಂಗನವಾಡಿ ಕಾರ್ಯಕರ್ತೆ ಗುಜಮ್ಮಾ ಕುರಿ ಅವರಿಗೆ ಬೈದು, ನಿಂದಿಸಿದ್ದರಿಂದ ಹೆದರಿದ ಕಾರ್ಯಕರ್ತೆ, ಸ್ಥಳದಲ್ಲಿಯೇ ಮೂರ್ಛೆ ಹೋಗಿದ್ದಾರೆ ಎನ್ನಲಾಗಿದೆ.
ಕೂಡಲೇ ಸ್ಥಳದಲ್ಲಿದ್ದ ಸಹೋದ್ಯೋಗಿಗಳು ಅವರನ್ನು ಆಟೋ ಮೂಲಕ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಗುಜಮ್ಮಾ ಕುರಿ, “ವಾಟ್ಸ್‌ಅಪ್ ಸ್ಟೇಟಸ್ ತಪ್ಪಾಗಿ ವಾಟ್ಸಪ್ ಗ್ರೂಪ್‌ಗೆ ಪೋಸ್ಟ್ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ಮೇಲ್ವಿಚಾರಕಿ ಸಂಗಮ್ಮಾ ಪಾಟೀಲ ನಿಂದಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ
“ಅಂಗನವಾಡಿ ಕಾರ್ಯಕರ್ತೆರಿಗೆ ಕವಡೆಕಾಸಿನ ಕಿಮ್ಮತ್ತು ನೀಡದೆ, ಅವಮಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಾರೆ” ಎಂದು ಗುಜಮ್ಮಾ ಕುರಿ ದೂರಿದರು.
ಈ ಮುಂಚೆ ಸಂಗಮ್ಮ ಪಾಟೀಲರವರು ಕಾರ್ಯನಿರ್ವಹಿಸಿದ ನಾಲವಾರ, ಭಂಕೂರನಲ್ಲಿಯೂ ಕೂಡ ಇದೇ ರೀತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಜಾತಿ ನಿಂದನೆ, ತಾರತಮ್ಯ ಮತ್ತು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೂಡ ಇದೇ ವೇಳೆ ಕೇಳಿಬಂದಿದೆ.
