ಬರಪರಿಹಾರ, ರೈತರ ಸಾಲ ಮನ್ನಾ, ಬಗರ್ ಹುಕುಂ ಸಾಗುವಳಿ ಚೀಟಿ ಹಾಗೂ ಗೃಹ ಲಕ್ಷ್ಮೀ ಸಮಸ್ಯೆ ಇತ್ಯರ್ಥ ಮಾಡುವಂತೆ ಶೋಷಿತ ಸಮಾಜ ವೇದಿಕೆ ಜೇವರ್ಗಿ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಜೇವರ್ಗಿ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಿ.ನೆಲೋಗಿ ಮಾತನಾಡಿ, “ಜೇವರ್ಗಿ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಯಾವುದೇ ಬೆಳೆ ಸರಿಯಾಗಿ ಫಸಲು ಬಾರದೇ ನಾಶವಾಗಿದ್ದು, ರೈತರು ಸಾಲ ಸೂಲ ಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕ ಔಷಧಿ ಖರೀದಿಸಿ ತುಂಬಾ ಸಂಕಷ್ಟದಲ್ಲಿ ನರಳುತ್ತಿದ್ದಾರೆ. ಅಲ್ಲದೇ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಸಾಲ ಕಟ್ಟಲಾಗದೇ ನರಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಳೆದ 25ರಿಂದ 30 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ (ಬಗರ್ ಹುಕುಂ) ಬಡ ಮಧ್ಯಮ ವರ್ಗದ ಕೂಲಿ ಕಾರ್ಮಿಕರಿಗೆ ಸಾಗುವಳಿ ಚೀಟಿ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬೆಳೆಹಾನಿ ಉಂಟಾಗಿರುವುದರಿಂದ ಎಕರೆಗೆ ₹25,000 ಬೆಳೆ ಪರಿಹಾರ ಒದಗಿಸಬೇಕು. ಗೃಹ ಲಕ್ಷ್ಮೀ ಸಮಸ್ಯೆ ಇತ್ಯರ್ಥ ಪಡಿಸಬೇಕು” ಎಂದು ಮುಖ್ಯಮಂತ್ರಿಯವರಿಗೆ ಆಗ್ರಹಿಸಿದರು.
“ಹಿಂದೆ ಇರುವ ಪಡಿತರ ಚೀಟಿಯಲ್ಲಿ ಗಂಡನ ಹೆಸರು ತೆಗೆದು ಹೆಂಡತಿಯ ಹೆಸರನ್ನು ನಮೂದು ಮಾಡಿದ ಪಡಿತರ ಚೀಟಿ ಗೃಹಲಕ್ಷ್ಮೀ ಅರ್ಜಿ ಸ್ವೀಕರಿಸುತ್ತಿಲ್ಲ. ಕಾರಣ ಸರ್ಕಾರದಿಂದ ತಡೆಹಿಡಿಯಾಲಾಗಿದೆ” ಎಂದರು.
“ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಬಿಡುಗಡೆಗೆ ಆಗ್ರಹ
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಿ ನೆಲೋಗಿ, ಮಲ್ಲು ನೇದಲಗಿ, ಹರಿಶ್ಚಂದ್ರ ಮದನಕರ್, ಗುಡೂರ, ಮಾಳಪ್ಪ ಕನ್ನೊಳ್ಳಿ, ಪರಮಾನಂದ ನೆಲೋಗಿ, ಮಡಿವಾಳಪ್ಪ ಎಸ್ ಜಗಲಗೊಂಡ,
ವೈ ಎಸ್ ಪಿ ಪಾಟೀಲ್, ಶರಣು ನೇರಡಗಿ, ದವಲಪ್ಪ ಶರ್ಮಾ ಕೆಲ್ಲೂರ, ನಬಿ ಪಟೇಲ್, ರುದ್ರಗೌಡ ಮಲಗೊಂಡ, ಮರೆಪ್ಪ ಪೂಜಾರಿ, ಸಿದ್ದಪ್ಪ ಮದನಕರ್, ಜೈಭೀಮ್ ಮದನಕರ, ಮಲ್ಲಿಕಾರ್ಜುನ ಹೆಳವರ ಚಿಗರಳ್ಳಿ, ನಬಿಲಾಲ ಸೇರಿದಂತೆ ಇತರರು ಇದ್ದರು.