ಇತ್ತೀಚೆಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ನೀಡಿರುವ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆ ಖಂಡಿಸಿ, ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಇಂದು ವಿವಿಧ ಸಂಘಟನೆಗಳು ಕಲಬುರಗಿ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆ ಕಲಬುರಗಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, “ಇತ್ತೀಚೆಗೆ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್…. ಎನ್ನುವುದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದ್ದರೆ ಸ್ವರ್ಗಕ್ಕಾದರೂ ಹೋಗುತ್ತಿದ್ದಿರಿ” ಎಂದು ಹೇಳಿದ್ದರು. ಈ ಹೇಳಿಕೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದೆ. ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್‌ಗೆ ಅವಮಾನ: ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ಆಕ್ರೋಶ
ಇಂದು ಕಾಂಗ್ರೆಸ್ ದೇಶದಾದ್ಯಂತ ಅಂಬೇಡ್ಕರ್ ಸಮ್ಮಾನ್ ಮಾರ್ಚ್ ನಡೆಸುತ್ತಿದೆ. ಈ ನಡುವೆ ಹಲವು ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಕಲಬುರಗಿಯಲ್ಲಿ ಸಂವಿಧಾನ ರಕ್ಷಣಾ ಸಮಿತಿ ಮತ್ತು ವಿವಿಧ ಸಂಘಟನೆಗಳು ಮಂಗಳವಾರ ಬಂದ್‌ಗೆ ಕರೆ ನೀಡಿವೆ.
ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಬೆಳ್ಳಂಬೆಳಗ್ಗೆ ಬಸ್, ಆಟೊ ಸಂಚಾರ ಸ್ಥಗಿತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸಂಘಟನೆಗಳು ಮುಚ್ಚಿಸಿವೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇನ್ನು ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಡಿಸೆಂಬರ್ 24ರಂದು ಗದಗದಲ್ಲಿಯೂ ಬಂದ್‌ಗೆ ಕರೆ ನೀಡಿದೆ. ಇನ್ನು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಇಂದು ಸಂಜೆ 4.30 ಗಂಟೆಗೆ ಅಜ್ಜರಕಾಡಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
