ಕಲಬುರಗಿ ಜಿಲ್ಲೆಯಾದ್ಯಂತ ಸತತ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ನೆರೆ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸೂಚಿಸಿದರು.
ʼನೆರೆ ಹಾವಳಿಯಿಂದ ಯಾವುದೇ ರೀತಿಯ ಜನ, ಜಾನುವಾರು ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದ ಮನೆ ಕುಸಿದು ಬಿದ್ದಲ್ಲಿ, ಭಾಗಶಃ ಹಾನಿಯಾದಲ್ಲಿ ಎನ್‌ಡಿಆರ್‌ಎಫ್/ ಎಸ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ತಕ್ಷಣವೇ ಪರಿಹಾರ ಒದಗಿಸಬೇಕುʼ ಎಂದು ತಿಳಿಸಿದರು.
ʼನೋಡಲ್ ಅಧಿಕಾರಿಗಳು ನದಿ ದಂಡೆ ಪ್ರದೇಶದಲ್ಲಿ ನೆರೆ ಹಾವಳಿಗೆ ತುತ್ತಾಗುವ ಸಂಭಾವ್ಯ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರ ಎಲ್ಲ ರೀತಿಯ ಸುರಕ್ಷತೆಯ ಬಗ್ಗೆ ಖಾತ್ರಿಪಡಿಸಬೇಕು. ನದಿ, ಜಲಾಶಯ, ಕೆರೆ, ಕಟ್ಟೆಯತ್ತ ಬಟ್ಟೆ ಒಗೆಯಲು, ದನ-ಕರು ಮೇಯಿಸಲು ಹೋಗದಂತೆ ಜನತೆಗೆ ತಿಳಿವಳಿಕೆ ಮೂಡಿಸಬೇಕು. ವಿಶೇಷವಾಗಿ ಯುವ ಸಮುದಾಯ ಇಂತಹ ಸಂದರ್ಭದಲ್ಲಿ ಸೆಲ್ಫಿ, ನೀರಿನಲ್ಲಿ ಈಜುವಂತಹ ದುಸ್ಸಾಹಸಗಳಿಗೆ ಮುಂದಾಗುವುದನ್ನು ಪೊಲೀಸ್ ಇಲಾಖೆ ತಡೆಯಬೇಕುʼ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ʼಗಾಣಗಾಪೂರ ಮತ್ತು ಘತ್ತರಗಾ ಮುಂತಾದ ಧಾರ್ಮಿಕ ಸ್ಥಳಗಳಿಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಗಮನ ಹರಿಸಬೇಕು. ಸತತ ಮಳೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಕಾಟ ಹೆಚ್ಚಲಿದ್ದು, ಆರೋಗ್ಯ ಇಲಾಖೆ ಇದರ ನಿಯಂತ್ರಣಕ್ಕೆ ಮುಂದಾಗಬೇಕು. ನೀರಿನ ಲ್ಯಾಬ್ ಟೆಸ್ಟ್ ಹೆಚ್ಚಿಸಿ ಶುದ್ಧ ನೀರಿನ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಬೇಕು. ಬೆಳೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕುʼ ಎಂದು ನಿರ್ದೇಶಿಸಿದರು.
ಸಭೆಯಲ್ಲಿ ನೀಡಲಾದ ಈ ಸಲಹೆ ಸೂಚನೆಗಳನ್ನು ಅಧಿಕಾರಿ ವರ್ಗವು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಜನಜೀವನವನ್ನು ರಕ್ಷಿಸುವುದನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ : ಬೀದರ್ | ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಚಿವದ್ವಯರ ಭೇಟಿ; ಪರಿಶೀಲನೆ
ಸಭೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.