ರಾಜ್ಯ ಸರ್ಕಾರ ಸೆ.17 ರಂದು ಕಲಬುರಗಿಯಲ್ಲಿ ನಡೆಸಿದ ಸಂಪುಟ ಸಭೆ ಸಮಾಧಾನ ತಂದಿದೆಯೇ ಹೊರತು, ನನಗೆ ತೃಪ್ತಿ ತಂದಿಲ್ಲ ಎಂದು ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಅಸಮಧಾನ ಹೊರ ಹಾಕಿದರು.
ಕಲಬುರಗಿಯ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ʼಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ. ಅನುದಾನ ಬರುತ್ತಿರುವುದನ್ನು ಹಳೆ ಮೈಸೂರು ಭಾಗದವರಿಗೆ ಹೊಟ್ಟೆ ಕಿಚ್ಚು ಶುರುವಾಗಿದೆ. ನಮ್ಮ ಅಭಿವೃದ್ಧಿ ಸಹಿಸಲಾಗದೆ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲ ಶಾಸಕರು ಸಭೆ ನಡೆಸಿ ಹಸಿರು ಸೇನೆಯ ವಿರುದ್ದ ಪ್ರತಿಭಟಿಸುತ್ತೇವೆʼ ಎಂದು ಹೇಳಿದರು.
ಸಂಪುಟ ಸಭೆ ತರಾತರಿಯಲ್ಲಿ ನಡೆದ ಕಾರಣ ಸಾಕಷ್ಟು ವಿಚಾರಗಳು ಚರ್ಚೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಆದರೆ, ಅಂತರ್ಜಲ ಮಟ್ಟ ಹೆಚ್ಚಳ ಮಾಡುವುದರ ಬಗ್ಗೆ ಗಮನ ಕೊಡ್ತಿಲ್ಲ. ಅದಕ್ಕಾಗಿ ಚಿಂತನೆ ನಡೆದಿಲ್ಲ. ಈ ಭಾಗದಲ್ಲಿ ತೊಗರಿ ಬೆಳೆ ಪ್ರಮುಖವಾಗಿದೆ. ಕಳೆದ ಹಲವಾರು ವರ್ಷಗಳಿಂದ ತೊಗರಿ ಬೆಳೆಗೆ ಸೂಕ್ತ ಬೆಂಬಲ ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಡಲಾಗಿದೆ. ತೊಗರಿ ಮಂಡಳಿಯು ನಿಶ್ಯಕ್ತವಾಗಿದೆ. ತೊಗರಿ ಮಂಡಳಿಗೆ ಶಕ್ತಿ ತುಂಬುವಂತಹ ಕೆಲಸ, ಟ್ರಿಬ್ಯುನಲ್ ರಚನೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿಲ್ಲʼ ಎಂದು ಅತೃಪ್ತಿ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹೃದಯಘಾತದಿಂದ ಕರ್ತವ್ಯ ನಿರತ ಎಸ್‌ಡಿಎ ಸಾವು
ಕಲ್ಯಾಣ ಕರ್ನಾಟಕದಲ್ಲಿ ಸಾಕ್ಷರತೆ ತೀರಾ ಕೆಳಮಟ್ಟದಲ್ಲಿದೆ. ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಈ ಭಾಗದ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸಕ, ಶಿಕ್ಷಕರ ಕೊರತೆ ಸಾಕಷ್ಟಿದೆ. ಮೊದಲು ಶಿಕ್ಷಕರ ಹುದ್ದೆಗಳ ನೇಮಕಾತಿ ಭರ್ತಿ ಮಾಡಬೇಕೆಂಬ ಬೇಡಿಕೆಯಿತ್ತು. ಆದರೆ ಅದರ ಬಗ್ಗೆ ಸಭೆಯಲ್ಲಿ ಯಾವುದೇ ಸ್ಪಷ್ಟತೆ ನೀಡಿಲ್ಲʼ ಎಂದು ಹೇಳಿದರು.