ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಕೋರಣೇಶ್ವರ ವಿರಕ್ತಮಠದ ಬಾವಿಗೆ ವಿಷಕಾರಿ ಕ್ರಿಮಿನಾಶಕ ಔಷಧ ಎಸೆದ ಆರೋಪದಡಿ ಮಠದಿಂದ ವಿಮುಕ್ತಗೊಂಡಿರುವ ಓರ್ವ ಸ್ವಾಮೀಜಿ ಹಾಗೂ ಒಬ್ಬ ಮಹಿಳೆ ವಿರುದ್ಧ ಆಳಂದ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಮಠದಿಂದ ವಿಮುಕ್ತಗೊಂಡಿರುವ ಮುರುಘೇಂದ್ರ ಸ್ವಾಮೀಜಿ (ಚಂದ್ರಶೇಖರಯ್ಯ ಅಸೂಟಿ) ಹಾಗೂ ಅನಿತಾ ಗಣಪತಿ ಎಂಬುವವರ ವಿರುದ್ಧ ಮಠದ ಟ್ರಸ್ಟ್ ಸಮಿತಿ ಸದಸ್ಯ ಹಣಮಂತ ಸಾವಳೇಶ್ವರ ನೇತೃತ್ವದಲ್ಲಿ ದೂರು ನೀಡಲಾಗಿತ್ತು. ವಿಮುಕ್ತಗೊಂಡ ನಂತರವೂ ಸ್ವಾಮೀಜಿ ಮಠದ ಹಿಂಬದಿಯ ತಗಡಿನ ಶೆಡ್‌ನಲ್ಲಿ ಉಳಿದುಕೊಂಡಿದ್ದಾರೆ.
ಅಸೂಟಿ ಅವರು ಮಠಕ್ಕೆ ಕೆಟ್ಟ ಹೆಸರು ತರಲು ಈ ಕೃತ್ಯ ಮಾಡಿದ್ದಾರೆ. ಮಠದ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಮಧ್ಯಾಹ್ನದ ಊಟ, ಕುಡಿಯುವ ನೀರಿಗಾಗಿ ಅದೇ ಬಾವಿಯ ನೀರು ಬಳಕೆ ಮಾಡಲಾಗುತ್ತದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟುಮಾಡಿ ಮಠಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇದೆ. ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.