ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಮೃತದೇಹವನ್ನು ಪ್ರಾಣಿಯ ರೀತಿ ಎಳೆದೊಯ್ದು ‘ಶ್ರೀ ಸಿಮೆಂಟ್ ಕಂಪನಿ’ ವಿಕೃತಿ ಮೆರೆದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದಲ್ಲಿರುವ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬಿಹಾರ ಮೂಲದ ಚಂದನ್ ಸಿಂಗ್ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಕಂಪನಿಯ ಸಿಬ್ಬಂದಿಗಳು ಮಣ್ಣಿನ ರಸ್ತೆಯಲ್ಲಿ ಪ್ರಾಣಿಯ ರೀತಿ ಎಳೆದೊಯ್ದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುತ್ತಿಗೆದಾರನ ಮೂಲಕ ಸಿಮೆಂಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಚಂದನ್ ಸಿಂಗ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದಾಗ್ಯೂ, ಮಂಗಳವಾರ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.
ಈ ವೇಳೆ, ಅವರಿಗೆ ಬಿಪಿ ‘ಲೋ’ ಆಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತಪಟ್ಟ ಕಾರ್ಮಿಕನ ಮೃಹದೇಹವನ್ನು ಸಿಮೆಂಟ್ ಕಂಪನಿಯು ಅಮಾನುಷವಾಗಿ ಎಳೆದೊಯ್ದು ವಿಕೃತಿ ಮೆರೆದಿದೆ.
ಕಾರ್ಮಿಕನ ಸಾವಿಗೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ.