ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿದ್ದ ಅಪರಾಧಿಯೋರ್ವನಿಗೆ ಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು ಗಲ್ಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ಆಳಂದ ತಾಲೂಕಿನ ದೇವಂತಗಿ ಗ್ರಾಮದ ಗುಂಡೇರಾವ ಚೋಪಡೆ (28) ಎಂಬಾತ ಗಲ್ಲು ಶಿಕ್ಷೆಗೊಳಗಾದ ಅಪರಾಧಿ.
2023ರ ಜುಲೈನಲ್ಲಿ ಪುಸ್ತಕ ತರಲು ನಡೆದುಕೊಂಡು ಹೋಗುತ್ತಿದ್ದ 11 ವರ್ಷದ ಬಾಲಕಿಯನ್ನು ಕೃಷಿ ಕೆಲಸ ಮಾಡುತ್ತಿದ್ದ ಗುಂಡೇರಾವ ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ಉಸಿರುಗಟ್ಟಿಸಿ ಸಾಯಿಸಿ ಶವವನ್ನು ಬಾವಿಗೆ ಎಸೆದಿದ್ದ. ಈ ಕುರಿತು ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ನಿಂಬರ್ಗಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದೀಗ ಘನ ನ್ಯಾಯಾಲಯ ಅಪರಾಧಿಗೆ ಪೋಕ್ಸೊ ಕಾಯ್ದೆಯಡಿ ಗಲ್ಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ. ಕಾನೂನು ಪ್ರಾಧಿಕಾರದಿಂದ ಮೃತ ಬಾಲಕಿಯ ತಾಯಿಗೆ ₹4 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶ ದಲ್ಲಿ ತಿಳಿಸಿದೆ. ಪೋಕ್ಸೊ ಪ್ರಕರಣವೊಂದರಲ್ಲಿ ಜಿಲ್ಲೆಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆಯಾಗಿದ್ದು ಇದೇ ಮೊದಲ ಪ್ರಕರಣ ಎನ್ನಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.
ಇದನ್ನೂ ಓದಿ: ಕಲಬುರಗಿ | ಪಿಡಿಒ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ