ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕವಲಗಾ ಗ್ರಾಮ ಪಂಚಾಯತಿಯಲ್ಲಿ 2022-23-24ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಮೋಟಾರ್ ಖರೀದಿ ಮತ್ತು ದುರಸ್ತಿ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡದೆ ಏಜೆನ್ಸಿಗಳ ಮುಖಾಂತರ ಹಣ ದುರ್ಬಳಕೆ ಮಾಡಿದ್ದಾರೆ ಎಂದು ದಲಿತ ಸೇನೆ ಆರೋಪಿಸಿದೆ.
ಕವಲಗಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮ ಖಂಡಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸೇನೆ ಆಳಂದ ತಾಲೂಕು ಸಮಿತಿ ವತಿಯಿಂದ ಕಲಬುರಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ಕವಲಗಾ ಗ್ರಾಮ ಪಂಚಾಯಿತಿಯಲ್ಲಿ 2022, 2023-24ನೇ ಸಾಲಿನಲ್ಲಿ ಬಂದ 15ನೇ ಹಣಕಾಸು, ಶೇ.5 ಪ್ರತಿಶತ ಮನರೇಗಾ ಕರವಸೂಲಿ ಮತ್ತು ಎಸ್‌ಸಿ/ಎಸ್‌ಟಿ ಹಾಗೂ ವಸತಿ ಯೋಜನೆಯಲ್ಲಿ ಭಾರೀ ಅವ್ಯವಹಾರ ಮಾಡಿ ಲೂಟಿ ಹೊಡೆದಿರುವದನ್ನು ಖಂಡಿಸಿ ತನಿಖೆ ಮಾಡಿ ತಪ್ಪಿಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
“ಮನರೇಗಾ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸದೆ ಸತಾಯಿಸುತ್ತಿದ್ದು, 2019-20ನೇ ಸಾಲಿನ ವಸತಿ ಯೋಜನೆಯಲ್ಲಿ ಸರ್ಕಾರಿ ನೌಕರ ಕುಟುಂಬದ ಹೆಸರಿನಲ್ಲಿ ಫಲಾನುಭವಿ ಹೆಸರಿಗೆ ಹಂಚಿಕೆಯಾದ ಮನೆಗಳನ್ನು ಬೇರೊಬ್ಬರ ಜಾಗದಲ್ಲಿ ನಿರ್ಮಿಸಿದ್ದು, ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ” ಎಂದು ಆರೋಪಿಸಿದರು.
“ಅಕ್ರಮಗಳ ಕುರಿತಂತೆ ಹಲವು ಬಾರಿ ದೂರುಗಳನ್ನು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಮನರೇಗಾ ಯೋಜನೆಯಲ್ಲಿ 2022-23ನೇ ಸಾಲಿನಲ್ಲಿ ಏಜೆನ್ಸಿಗಳ ಮುಖಾಂತರ ರಾಜೇಶ್ವರಿ ಗಣೇಶ ಹಾಗೂ ಇನ್ನಿತರ ಏಜೆನ್ಸಿ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಹಣ ಎತ್ತಿಕೊಂಡಿದ್ದಾರೆ. ಹೀಗೆ ಬಹುತೇಕ ಅಕ್ರಮಗಳನ್ನು ನಡೆಸಿ ಅನುದಾನವನ್ನು ಲೂಟಿ ಮಾಡಿದ್ದಾರೆ. ಅಂಗವಿಕಲರಿಗಾಗಿ ಬಂದ ಶೇ.5ರಷ್ಟು ಅನುದಾನ ನೀಡದೆ ದುರ್ಬಳಕೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ಕಾಮಗಾರಿ ಮಾಡದೆ ಹಣ ದುರ್ಬಳಕೆ ಮಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಗುಲ್ಬರ್ಗಾ ವಿವಿ ಉಪನ್ಯಾಸಕನಿಂದ ಮೊಬೈಲ್‌ನಲ್ಲೇ ಲೈಂಗಿಕ ಕಿರುಕುಳ; ತಡವಾಗಿ ಬೆಳಕಿಗೆ ಬಂದ ಆಡಿಯೋ
“ಎಸ್‌ಸಿ/ಎಸ್‌ಟಿ ಅನುದಾನವನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡಬೇಕು, ಮನರೇಗಾ ಕೂಲಿ ಕಾರ್ಮಿಕರ ವೇತನ ಪಾವತಿಸಬೇಕು ಮತ್ತು ಕೂಡಲೇ ಕೆಲಸ ಪ್ರಾರಂಭಿಸಬೇಕು. ಅಂಗವಿಕಲರ ಶೇ.5ರಷ್ಟು ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ನೀಡಬೇಕು. ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶರಣು ಕವಲಗಿ, ದತ್ತಾ ಕಡಗಂಚಿ, ದಲಿತ ಸೇನಾ ಉಪಾಧ್ಯಕ್ಷ ದಿಲೀಪ ಮಟಕಿ, ಹಣಮಂತ ಗಾಯಕವಾಡ, ಶಶಿಧರ ನವರಂಗ, ಸಂದೀಪ ಕಾಳೆಕಿಂಗೆ, ಗುಂಡಪ್ಪಾ ಅರಣೋದಯ, ಲಕ್ಷ್ಮಣ ನಿಂಬಾಳ, ನೀಲಪ್ಪಾ ಕಾಂಬಳೆ, ಜೈಭೀಮ್ ಕಂಟೆಕೊರೆ ಮುಸ್ತಾಫಾ ಹಕೀಮಜಿ, ಶಿವಲಿಂಗ ಮಾಡ್ಯಾಳಕರ, ಶಶಿ ನರೋಣೆ, ಧರ್ಮಾ ಜಿ ಬಂಗರಗಿ, ಮಹೇಶ ಕೋಚಿ, ಶಿವಲಿಂಗಪ್ಪಾ ಚನ್ನಗುಂಡ, ಮಂಜು ಸಿಂಗೆ, ವಸಂತ ಕುಮಸಿ, ಸಂದೀಪ ಕಾಂಬಳೆ, ಸಿದ್ದಾರ್ಥ ಗಾಯಕವಾಡ ಸೇರಿದಂತೆ ಇತರರು ಇದ್ದರು.