ದಲಿತಸಮುದಾಯದ ವಿದ್ಯಾರ್ಥಿಗಳಿಗೆ ಕ್ಷೌರ ಮಾಡಲು ನಿರಾಕರಿಸಿ, ಜಾತಿ ತಾರತಮ್ಯ ಮತ್ತು ದೌರ್ಜನ್ಯ ಎಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕ್ಷೌರಿಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ 27ರಂದು, ಗ್ರಾಮದ ಶಾಲಾ ಮಕ್ಕಳು ಕ್ಷೌರ ಮಾಡಿಸಿಕೊಳ್ಳಲು ಕ್ಷೌರದ ಅಂಗಡಿಗೆ ಹೋಗಿದ್ದರು. ಈ ವೇಳೆ, ದಲಿತ ಮಕ್ಕಳಿಗೆ ಕ್ಷೌರ ಮಾಡಲು ಕ್ಷೌರಿಕ ನಿರಾಕರಿಸಿದ್ದು, ‘ನೀವು ಏನು ಬೇಕಾದರು ಮಾಡಿಕೊಳ್ಳಿ. ನಾನು ದಲಿತರಿಗೆ ಕ್ಷೌರ ಮಾಡುವುದಿಲ್ಲ’ ಎಂದು ಜಾತಿ ದರ್ಪ ಮೆರೆದಿರುವುದಾಗಿ ಆರೋಪಿಸಲಾಗಿದೆ.
ಕ್ಷೌರಿಕನನ್ನು ಕ್ಷೌರ ಮಾಡುವಂತೆ ಮನವೊಲಿಸರು ದಲಿತ ಮುಖಂಡರು ಪ್ರಯತ್ನಿಸಿದ್ದಾರೆ. “ಮಕ್ಕಳಿಗೆ ಕ್ಷೌರ ಮಾಡಿಸಿಕೊಂಡು ಬರುವಂತೆ ಶಿಕ್ಷಕರು ಸೂಚಿಸಿದ್ದಾರೆ. ಅದಕ್ಕಾಗಿ, ಮಕ್ಕಳು ಇಲ್ಲಿಗೆ ಬಂದಿದ್ದಾರೆ. ಮಕ್ಕಳಿಗೆ ಯಾಕೆ ಕ್ಷೌರ ಮಾಡಲ್ಲ. ಮಕ್ಕಳಿಗೆ ಕ್ಷೌರ ಮಾಡಿ” ಎಂದು ವಿನಂತಿಸಿದ್ದಾರೆ.
ಆದರೆ, ಕ್ಷೌರಿಕ, “ನಮ್ಮ ಹಿರಿಯರು ಹೊಲೆಯ-ಮಾದಿಗರಿಗೆ ಕ್ಷೌರ ಮಾಡಿಲ್ಲ. ನಾವೂ ಮಾಡುವುದಿಲ್ಲ” ಎಂದು ಜಾತಿಯ ಅಹಂನಲ್ಲಿ ಮಾತನಾಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮದ ದಲಿತ ಯುವಕ ಮಲ್ಲಿಕಾರ್ಜುನ್ ಶೃಂಗೇರಿ, “ಗ್ರಾಮದಲ್ಲಿ ಹಲವು ವರ್ಷಗಳಲ್ಲಿ ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರು ನಿರಾಕರಿಸುತ್ತಲೇ ಬಂದಿದ್ದಾರೆ. ದಲಿತರು ಕ್ಷೌರಕ್ಕಾಗಿಯೂ 10 ಕಿ.ಮೀ ದೂರದ ಆಳಂದ ಪಟ್ಟಣ ಅಥವಾ ತಡಕಲ್ ಗ್ರಾಮಕ್ಕೆ ತೆರಳಬೇಕಾಗಿದೆ. ಗ್ರಾಮದ ಪ್ರಬಲ ಜಾತಿಗರ ಪ್ರಭಾವದಿಂದ ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರು ನಿರಾಕರಿಸುತ್ತಿದ್ದಾರೆ. ಗ್ರಾಮದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ. ಆದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದು ಗ್ರಾಮಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದಾರೆ. ದಲಿತರಿಗೆ ಕ್ಷೌರ ಮಾಡುವಂತೆ ಕ್ಷೌರಿಕನಿಗೆ ಸೂಚಿಸಿದ್ದಾರೆ. ಆದರೂ, ಕ್ಷೌರಿಕ ನಿರಾಕರಿಸಿದ್ದು, ಪೊಲೀಸರು ಜಾತಿದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ, ಕ್ಷೌರ ಮಾಡಲು ಕ್ಷೌರಿಕ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ದಲಿತ ಸಮುದಾಯದ ಮುಖಂಡರೊಬ್ಬರು ಕ್ಷೌರಿಕನ ವಿರುದ್ದ ಜಾತಿ ತಾರತಮ್ಯ ಮತ್ತು ನಿಂದನೆ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.