ಸಾಕು ಹಂದಿಗಳು ಕಬ್ಬು ಬೆಳೆದ ಜಮೀನುಗಳಿಗೆ ನುಗ್ಗಿ ಫಸಲನ್ನು ಹಾಳು ಮಾಡುತ್ತಿವೆ. ಹಂದಿಗಳ ಕಾಟದಿಂದ ರೈತರು ಕಂಗಲಾಗಿದ್ದಾರೆ. ಹಂದಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಕಲಬುರಗಿ ಜಿಲ್ಲಾಧಿಕಾರಿಗೆ ರೈತರು ಮನವಿ ಸಲ್ಲಿಸಿದರು.
“ನಾವು ನಮ್ಮ ಗ್ರಾಮದ ಬಹುತೇಕ ಜಮೀನುಗಳಲ್ಲಿ ಕಬ್ಬು ಬೆಳೆಯನ್ನು ಬೆಳೆದಿದೆ. ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಕಬ್ಬು ಒಣಗಿ ಹೋಗಿದೆ. ಆದರೆ ಕೆಲವು ರೈತರು ಕೊಳವೆ ಬಾವಿ ನೀರು ಉಪಯೋಗಿಸಿಕೊಂಡು ಕಬ್ಬು ಬೆಳೆಯನ್ನು ಕಾಪಾಡಿಕೊಂಡು ಬಂದಿದ್ದಾರೆ” ಎಂದು ಕಲಬುರಗಿ ತಾಲೂಕಿನ ಸೀತನೂರು ಗ್ರಾಮಸ್ಥರು ತಿಳಿಸಿದ್ದಾರೆ.
“ಸಾಕು ಹಂದಿಗಳು ಹಾವಳಿ ಹೆಚ್ಚಾಗಿದ್ದು, ಚೆನ್ನಾಗಿ ಬೆಳೆದಿರುವ ಕಬ್ಬಿನ ಜಮೀನುಗಳಿಗೆ ನುಗ್ಗಿ ಫಸಲವನ್ನು ಹಾಳು ಮಾಡುತ್ತಿವೆ. ಈ ಕುರಿತು ಹಂದಿ ಸಾಕಾಣಿಕೆಗಾರರಿಗೆ ಹಲವು ಬಾರಿ ಮನವಿ ಮಾಡಿದರೂ ಅವರು ಬೇಜವಾಬ್ದಾರಿ ತೋರುತ್ತಿದ್ದಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಕಬ್ಬು ಬೆಳೆಗಾರರಿಗೆ ಬೇರೆ ದಾರಿ ಕಾಣದೆ ಕಂಗಾಲಾಗಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಂದಿಗಳು ಈಗಾಗಲೇ ಜಮೀನುಗಳಿಗೆ ನುಗ್ಗಿ ಬಹುತೇಕ ಫಸಲನ್ನು ಹಾಳು ಮಾಡಿದ್ದು, ಜಮೀನಿನ ಮಾಲೀಕರು ಹಂದಿ ಹಿಡಿಯುವವರನ್ನು ಕರೆಸಿ ಅವರಿಗೆ ಸಾವಿರಾರು ರೂಪಾಯಿ ನೀಡಿ ಹಂದಿಗಳನ್ನು ಹಿಡಿಸಿದ್ದರೂ ಯಾವುದೇ ಪ್ರಯೋಜನವಾಗದೆ ದಿನದಿಂದ ದಿನಕ್ಕೆ ಬೆಳೆಹಾನಿಯಾಗುತ್ತಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ” ಎಂದು ಅವಲತ್ತುಕೊಂಡರು.
“ಸೀತನೂರ್ ಗ್ರಾಮದ ಕಬ್ಬು ಬೆಳೆದ ಜಮೀನುಗಳಲ್ಲಿ ಉಂಟಾದ ಹಾನಿಯನ್ನು ಕಂಡು ಹಿಡಿಯಲು ಒಂದು ತಂಡವನ್ನು ರಚಿಸಲು ಕ್ರಮ ಕೈಗೊಳ್ಳಬೇಕು. ಸದರಿ ತಂಡದಿಂದ ತನಿಖೆ ಕೈಗೊಂಡು ದೃಢೀಕರಣ ನೀಡಿದಲ್ಲಿ ರೈತರಿಗೆ ನ್ಯಾಯಯುತವಾಗಿ ಬರಬೇಕಾದ ಪರಿಹಾರಧನ ಪಡೆಯಲು ಸಹಕಾರಿಯಾಗುತ್ತದೆ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಹಾಸ್ಟೆಲ್‌ಗಳಲ್ಲಿ ಮೆರಿಟ್, ಕೌನ್ಸಲಿಂಗ್ ಹೆಸರಿನ ಆಯ್ಕೆ ಪ್ರಕ್ರಿಯೆ ಕೈಬಿಡಲು ಆಗ್ರಹ
“ಹಂದಿಗಳಲ್ಲಿ ಹೆಚ್ಚಾಗಿ ಸಾಕು ಹಂದಿಗಳಾಗಿದ್ದು, ಅದರ ಮಾಲೀಕರು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸುಗುತ್ತಿದ್ದಾರೆ. ಹಾಗಾಗಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಹಂದಿ ಸಾಕಾಣಿಕೆದಾರರ ವಿರುದ್ಧ ಕ್ರಮ ಕೈಗೊಂಡು ಸೂಕ್ತ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಮೀರ ಪಟೇಲ್ ಮಾಲಿ, ಶಿವಯ್ಯ ಸ್ವಾಮಿ, ವೀರಣ್ಣ ಮಲ್ಕೂಡ, ಪೀರ್ ಸಾಬ್ ಜಮಾದಾರ್, ಸಿದ್ದಣ್ಣ ಜಮ್ದಿ, ಮೈಬುಸಾಬ್ ಮಾಲಿ, ರಾಜು ಪೂಜಾರಿ, ಮೌಲಾಸಾಬ್ ಜಮಾದಾರ್, ಸಾಯಬ ಪಟೇಲ್ ಮಾಲಿ, ಶಿವಲಿಂಗಪ್ಪ ಜಮ್ದಿ, ಅಲಿಸಾ ದಂಗಾಪುರ್ ಇದ್ದರು.