ರಾಜ್ಯ ಹೆದ್ದಾರಿ ಗುಣಮಟ್ಟದ ರಸ್ತೆ ನಿರ್ಮಾಣ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಲಬುರಗಿ ಜಿಲ್ಲೆ ಶಹಾಬಾದ್‌ನ ಪ್ರಗತಿಪರ ಸಂಘಟನೆಗಳು ಹಾಗೂ ಪ್ರಗತಿಪರರ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಎರಡನೇ ಹಂತದ ಬೃಹತ್ ಪ್ರಮಾಣದ ರಸ್ತಾ ರುಕೋ ಚಳುವಳಿ ನಡೆಸಿ ಶಹಾಬಾದ್ ತಹಶೀಲ್ದಾರ್ ಮೂಲಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮತ್ತು ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ
ಮನವಿ ಪತ್ರ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, “ಶಹಾಬಾದ್ ನಗರವು ಇಡಿ ಜಿಲ್ಲೆಯಲ್ಲಿಯೇ ನಗರಸಭೆ ಹಾಗೂ ತಾಲೂಕು ಕೇಂದ್ರವಾಗಿದ್ದು, ಈ ನಗರವು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ನಗರದ ಹೃದಯ ಭಾಗವಾಗಿರುವ ವಾಡಿ ಕ್ರಾಸ್(ಎಬಿಎಲ್)ಯಿಂದ ಎಸ್ ಎಸ್ ಮರಗೋಳ ಕಾಲೇಜಿನವರೆಗಿನ ರಾಜ್ಯ ಹೆದ್ದಾರಿಯಲ್ಲಿ ನಿತ್ಯ ನೂರಾರು ಶಾಲಾ ಮಕ್ಕಳು, ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ಶಾಲಾ ವಾಹನಗಳು ಸಂಚರಿಸುತ್ತಾರೆ. ಆದರೆ, ನಗರದ ಹೆಬ್ಬಾಗಿಲಾಗಿರುವ ಈ ರಾಜ್ಯ ಹೆದ್ದಾರಿಯು ಸಂಪೂರ್ಣವಾಗಿ ತಗ್ಗು, ಗುಂಡಿಗಳಿಂದ ಕೂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬೇಸಿಗೆಯಲ್ಲಿ ಧೂಳಿನ ಸ್ನಾನ, ಮಳೆಗಾಲದಲ್ಲಿ ಕೆಸರಿನ ಸ್ನಾನ ಮಾಡುವ ಪರಿಸ್ಥಿತಿ ಇದೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಹಿಡಿ ಶಾಪಹಾಕಿ ಪ್ರಯಾಣಿಸುವ ದುಃಸ್ಥಿತಿ ಬಂದಿದೆ. ಈ ಹೆದ್ದಾರಿಗೆ ಜಿಲ್ಲಾಧಿಕಾರಿ, ಶಾಸಕರು ಭೇಟಿ ನೀಡಿ ಪರಿಶಿಲಿಸಿದ್ದಾರೆ. ಆದರೆ ರಸ್ತೆ ಮಾತ್ರ ಸುಧಾರಣೆಗೊಂಡಿಲ್ಲ. ಎಲ್ಲ ರಾಜಕೀಯ ಮುಖಂಡರು, ಉನ್ನತಾಧಿಕಾರಿಗಳು ಪ್ರಯಾಣ ಮಾಡಿದರೂ ಕೂಡಾ ಈ ಹೆದ್ದಾರಿಗೆ ಗಮನ ನೀಡಿಲ್ಲ. ಹಲವು ಬಾರಿ ಟೆಂಡರ್ ಕರೆದು, ಒಲ್ಲದ ಮನಸ್ಸಿನಿಂದ ನಾಮಕವಾಸ್ತೆ ಹೆದ್ದಾರಿ ಕೆಲಸ ನಡೆದಿಸಿದ್ದಾರೆ ಎಂದು ಆರೋಪಿಸಿದರು.
“ರಸ್ತೆ ಕಾಮಗಾರಿ ನಡೆದ ಬೆನ್ನಲ್ಲೇ ಪುನಃ ಕೆಟ್ಟು ಹೋಗಿದೆ. ಮತ್ತು ಎಸ್ ಎಸ್ ಮರಗೋಳ ಕಾಲೇಜಿನಿಂದ ತೊನಸಳ್ಳಿ ಮುಖಾಂತರ ಜೇವರ್ಗಿ ಕ್ರಾಸ್‌ವರೆಗೆ ಈ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರು, ವಾಹನ ಚಾಲಕರು, ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಆದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ” ಎಂದು ಹೇಳಿದರು.
“ಈ ಕುರಿತು ಹಲವು ಸಂಘಟನೆಗಳು ಪ್ರತಿಭಟನೆ, ರಸ್ತಾ ರುಕೋ ಚಳವಳಿ ಮಾಡಿದರೂ ಕೂಡಾ ಅಧಿಕಾರಿಗಳು ಸುಳ್ಳು ಭರವಸೆ ನೀಡುತ್ತಾರೆ. ನಾವು ಮೊದಲನೇ ಹಂತದ ಚಳವಳಿ ಮಾಡಿದಾಗ ಶಹಾಬಾದ್ ಸ್ಥಳೀಯ ಗ್ರಾಮೀಣ ಶಾಸಕರು ಪತ್ರಿಕೆ ಹೇಳಿಕೆ ನೀಡಿ, 8 ದಿನಗಳಲ್ಲಿ 8 ಕೋಟಿ ಮಂಜೂರು ಮಾಡಿ, ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದರು. 2023ರ ಅಕ್ಟೋಬರ್ 09ರಂದು ನಡೆದ ರಸ್ತಾ ರುಕೋ ಚಳವಳಿ ಸ್ಥಳಕ್ಕೆ ಆಗಮಿಸಿದ ಸೇಡಂ ಕಾರ್ಯನಿರ್ವಾಹಕ ಅಭಿಯಂತರು ʼ8 ಕೋಟಿ ರೂಪಾಯಿ ಮಂಜೂರಾಗಿದೆ. ಒಂದು ತಿಂಗಳಲ್ಲಿ ಕೆಲಸ ಆರಂಭಿಸುತ್ತೇವೆʼ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದರು. ಕಲಬುರಗಿ ಕಾರ್ಯನಿರ್ವಾಹಕ ಅಭಿಯಂತರರು, ʼ8 ದಿನಗಳಲ್ಲಿ ಫಿರೋಜಾಬಾದ್ ಕ್ರಾಸ್‌ನಿಂದ ತೋನಸನಹಳ್ಳಿ(ಎಸ್)ವರೆಗೆ 2.5 ಕೋಟಿ ರೂಪಾಯಿ ಮಂಜೂರಾಗಿದ್ದು, ಕೆಲಸ ಪ್ರಾರಂಭಿಸುತ್ತೇವೆʼ ಎಂದು ಬರೆದು ಕೊಟ್ಟಿದ್ದರು. ಎಲ್ಲರ ಭರವಸೆ ಮೇರೆಗೆ ಅಂದಿನ ರಾಸ್ತಾ ರುಕೋ ಚಳವಳಿ ಹಿಂಪಡೆಯಲಾಗಿತ್ತು. ಮುಂದೆ ಅವರ ಭರವಸೆಯಂತೆ ಪದೇಪದೆ ಕೇಳಿದದೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಶಹಾಬಾದ್ ನಗರದ ಬಸವೇಶ್ವರ ವೃತ್ತದಲ್ಲಿ ಇದೀಗ 2ನೇ ಹಂತದ ರಸ್ತಾ ರುಕೋ ಚಳವಳಿ ಹಮ್ಮಿಕೊಳ್ಳಲಾಗಿದೆ. ಎಲ್ಲ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತ ಆಂದೋಲನದಿಂದ ಮಾತ್ರ ಸಾಧ್ಯ. ಈ ಚಳುವಳಿಯಲ್ಲಿ ತಾಲೂಕಿನ ಎಲ್ಲ ಪ್ರಗತಿಪರ ಚಿಂತಕರು, ವ್ಯಾಪಾರಸ್ತರು, ಸಂಘಟನೆಯ ಮುಖಂಡರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಎಲ್ಲ ಸಾರ್ವಜನಿಕರು ಪಾಲ್ಗೊಂಡಿದ್ದಾರೆ” ಎಂದರು.
“ವಾಡಿ ಕ್ರಾಸ್‌ನಿಂದ ಮರಗೋಳ ಕಾಲೇಜು ಮುಖಾಂತರ ತೊನಸನಹಳ್ಳಿವರೆಗೆ ಈ ರಾಜ್ಯ ಹೆದ್ದಾರಿಯ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಎರಡು ಸಲ ಟೆಂಡರ್ ಕರೆದು 6 ಕೋಟಿ ರೂಪಾಯಿ ಲೂಟಿ ಮಾಡಿದ ಅಧಿಕಾರಿಗಳನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು. ವಾಡಿ ಕ್ರಾಸ್‌ನಿಂದ ಎಸ್ ಎಸ್ ಮರಗೋಳ ಕಾಲೇಜುವರೆಗೆ ದಾರಿ ದೀಪಗಳನ್ನು ಅಳವಡಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ನಾಯಿ, ಹಂದಿಗಳ ಹಾವಳಿ ಹೆಚ್ಚಾಗಿದ್ದು, ಜನರು ಭಯಭೀತಿಯಲ್ಲಿದ್ದಾರೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಯಾದಗಿರಿಯಿಂದ ಕಲಬುರಗಿಗೆ ಹೋಗುವ ಎಕ್ಸ್‌ಪ್ರೆಸ್ ಬಸ್‌ಗಳು ಶಹಾಬಾದ್ ಜನರು, ವಿದ್ಯಾರ್ಥಿಗಳು, ಮಹಿಳೆಯರು, ರೈತರು ಹಾಗೂ ಕಾರ್ಮಿಕರ ಅನೂಕೂಲಕ್ಕಾಗಿ ಎಬಿಎಲ್ ಕ್ರಾಸ್‌ನಲ್ಲಿ ನಿಲ್ಲಬೇಕು. ಶಹಾಬಾದ್ ನಗರದಲ್ಲಿ ನಗರಸಭೆಯು ಪ್ರಸ್ತುತ ಫಿಲ್ಟರ್ ನೀರು ಸರಬರಾಜು ಮಾಡುತ್ತಿದ್ದು, ಅದು ಅಶುದ್ಧವಾಗಿದೆ. ಅದಕ್ಕಾಗಿ ಶುದ್ಧ ನೀರು ಸರಬರಾಜು ಮಾಡುವವರೆಗೆ ಶಹಾಬಾದ್ ನಗರಸಭೆ ಜನರಿಗೆ ನೀರಿನ ಶುಲ್ಕ(ಬಿಲ್) ಕೇಳುವಂತಿಲ್ಲ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಸಿಎಂ ಹಾಸ್ಟೆಲ್‌ನಲ್ಲಿ ಗಾಂಜಾ ಹಾವಳಿ ಆರೋಪ; ಅಧಿಕಾರಿಗಳ ನಿರ್ಲಕ್ಷ್ಯ
“ನಗರಸಭೆಯಿಂದ ದಿನದ 24 ಗಂಟೆಯೂ ನೀರು ಸರಬರಾಜು ಮಾಡುವುದಾಗಿ ಹೇಳಿ ಈಗ ಕೇವಲ 3 ಗಂಟೆಯಲ್ಲೇ ನೀರು ಸರಬರಾಜು ನಿಲ್ಲಿಸಲಾಗುತ್ತಿದೆ. ಹಾಗಾಗದೆ ದಿನದ 24 ಗಂಟೆಯೂ ನೀರು ಸರಬರಾಜು ಮಾಡಬೇಕು. ಶಹಾಬಾದ್ ನಗರದಲ್ಲಿ ಕೂಡಲೇ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
ಜಗನಾಥ್ ಎಸ್ ಎಚ್, ಗುಂಡಮ್ಮ ಮಡಿವಾಳ, ಪೂಜಪ್ಪ ಎಸ್ ಮೇತ್ರಿ, ನಾಗಣ್ಣ ರಾಂಪೂರೆ, ರಾಮಣ್ಣ ಇಂಬ್ರಾಹಿಂಪುರ, ಮಹ್ಮದ ಮಾಸ್ತನ್, ನಾಗಪ್ಪ ರಾಯಚೂರಕರ್, ಗಣಪತರಾವ ಮಾನೆ, ವಿಶ್ವರಾಜ್ ಫಿರೋಜಬಾದ್, ಮಲ್ಲಣ್ಣ ಮಸ್ಕಿ, ಶರಣಗೌಡ ಪಾಟೀಲ್, ಯಲ್ಲಾಲಿಂಗ ಹೈಯ್ಯಾಳಕರ್, ಮಲ್ಲೇಶಿ ಭಜಂತ್ರಿ, ರಾಯಪ್ಪ ಹುರಮುಂಜಿ, ಶಿವಕುಮಾರ್, ಮಲ್ಕಣ್ಣ ಮುದ್ದಾ ಸೇರಿದಂತೆ ಇತರರು ಇದ್ದರು.
