ಕನಿಷ್ಠ ವೇತನ ಜಾರಿ, ಅಂಗನವಾಡಿ ನೌಕರರ ಹುದ್ದೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 9ರಂದು ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದರು.
ಕಲಬುರ್ಗಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಕಾರ್ಪೊರೇಟ್ ಬಂಡವಾಳಗಾರರ ₹18.32 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ದೇಶದ ಭವಿಷ್ಯವನ್ನು ರೂಪಿಸುವ ಮಾನವ ಸಂಪನ್ಮೂಲದ ಬೆಳವಣಿಗೆಗೆ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ಕೊಡುತ್ತಿಲ್ಲ’ ಎಂದರು.
‘ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ (ಐಸಿಡಿಎಸ್) ಕಳೆದ 50 ವರ್ಷಗಳಿಂದ ಅಂಗನವಾಡಿ ನೌಕರರು ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದಡಿ ಈ ಯೋಜನೆಯನ್ನು ಕಾಯಂ ಮಾಡಬೇಕು. ಗುಜರಾತ್ ಹೈಕೋರ್ಟ್ ಸಹ ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕೆಂದು ತೀರ್ಪು ನೀಡಿದೆ. ಕಾಯಂ ಮಾಡುವವರೆಗೆ ಕನಿಷ್ಠ ವೇತನ ನೀಡಬೇಕು’ ಎಂದು ಆಗ್ರಹಿಸಿದರು.
‘ಐಸಿಡಿಎಸ್ ಯೋಜನೆಯ ಬಜೆಟ್ ಹೆಚ್ಚಿಸಬೇಕು. ಅಂಗನವಾಡಿ ನೌಕರರಿಗೆ ಮಾಸಿಕ ₹26 ಸಾವಿರ ಕನಿಷ್ಠ ವೇತನ ಹಾಗೂ ₹10 ಸಾವಿರ ಮಾಸಿಕ ಪಿಂಚಣಿ ನೀಡಬೇಕು. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ಹೊಸದಾಗಿ ತಂದಿರುವ ನಾಲ್ಕು ಸಂಹಿತೆಗಳನ್ನೂ ಹಿಂಪಡೆಯಬೇಕು. ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭ ಮಾಡಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಕೊಪ್ಪಳ | ಅಂಜನಾದ್ರಿ ದೇವಾಲಯ ಬಳಿಯ ಅಂಗಡಿಗಳಲ್ಲಿ ಸರಣಿ ಕಳ್ಳತನ; ಪೊಲೀಸರ ಭೇಟಿ
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಜಿಲ್ಲಾ ಅಧ್ಯಕ್ಷೆ ಗೌರಮ್ಮ ಪಾಟೀಲ, ಉಪಾಧ್ಯಕ್ಷೆ ಶ್ರೀದೇವಿ ಚುಡೆ, ಪ್ರಮುಖರಾದ ರಾಜಮತಿ, ಸುಶೀಲಾ ಹತ್ತಿ, ಜಯಶ್ರೀ ಉಪಸ್ಥಿತರಿದ್ದರು.