ಪರಿಶಿಷ್ಟರ ಹಣ, ಪರಿಶಿಷ್ಟರಿಗೆ ಮಾತ್ರ ನೀಡುವಂತೆ ಒತ್ತಾಯಿಸಿ, ಎಸ್‌ಸಿಎಸ್‌ಪಿ-ಟಿಎಸ್‌ಪಿ 2013 ಕಾಯ್ದೆಯ ಕಾಲಂ 7ಸಿ ಕೂಡಲೇ ರದ್ದುಗೊಳಿಸಬೇಕು, ಸರ್ಕಾರದ 38 ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳು ಭರ್ತಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಲಬುರಗಿ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಮನವಿ ಸಲ್ಲಿಸಿದರು.
ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ದಸಂಸ ರಾಜ್ಯ ಸಂ. ಸಂಚಾಲಕ ಸುರೇಶ ಮೆಂಗನ ಮಾತನಾಡಿ, “ಕಾಯ್ದೆ 2013ನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನ ಬದ್ಧವಾಗಿ ಹೊಂದಲು ರಾಜ್ಯ ಸರ್ಕಾರವು ರೂಪಿಸಿದೆ. ಈ ಕಾಯ್ದೆಯ ಕಲಂ 7ಡಿ ಮತ್ತು 7ಸಿ ರಲ್ಲಿ ಕಾಯ್ದೆಯಡಿ ನಿಗದಿ ಪಡಿಸಿದ ಅನುದಾನವನ್ನ ಅನ್ಯ ಉದ್ದೇಶಗಳಿಗೆ ಬಳಸಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಸರ್ಕಾರಗಳು ಅವಕಾಶ ನೀಡಿರುತ್ತವೆ. ಆದ್ದರಿಂದ ಸದರಿ 7ಡಿ ಮತ್ತು 7ಸಿ ಕಾಲಂಗಳನ್ನು ರದ್ದು ಪಡಿಸುವಂತೆ ದಲಿತರ ಹಲವಾರು ಹೋರಾಟಗಳ ಫಲದಿಂದ ಕೇವಲ 7ಡಿ ರದ್ದು ಮಾಡಿ 7ಸಿ ಅನ್ನು ಉಳಿಕೊಂಡಿರುವುದು ಮತ್ತೆ 2024-25 ಹಾಗೂ 2025-26ನೇ ಸಾಲಿನಲ್ಲಿ ಕೂಡ ಗ್ಯಾರಂಟಿ ಯೋಜನೆಗಳನ್ನೊಳಗೊಂಡಂತೆ ಅನ್ಯ ಯೋಜನೆಗಳಿಗೆ ಎಸ್‌ಸಿಎಸ್‌ಪಿ- ಟಿಎಸ್‌ಪಿ ಹಣ ಉಪಯೋಗಿಸುವಂತೆ ಅವಕಾಶ ನೀಡುವ ಮೂಲಕ ಪರಿಶಿಷ್ಟರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರ ತಪ್ಪಿಸುತ್ತಿರುವುದನ್ನು ದಸಂಸ ಖಂಡಿಸುತ್ತದೆ” ಎಂದರು.
“ಕಳೆದ 11 ವರ್ಷಗಳಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಹೆಸರಲ್ಲಿ ಸುಮಾರು 4 ಲಕ್ಷ ಕೋಟಿಗೂ ಹೆಚ್ಚು ಅನುದಾನವನ್ನು ನೀಡಿದ್ದು, ಈ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸದೇ ನೇರವಾಗಿ ಪರಿಶಿಷ್ಟರ ಕುಟುಂಬಗಳಿಗೆ ಹಂಚಿಕೆ ಮಾಡಿದ್ದರೆ ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೂ ತಲಾ 20 ಲಕ್ಷಗಳು ತಲುಪ ಬೇಕಾಗಿತ್ತು. ಸರ್ಕಾರವಾಗಲೀ ವಿರೋಧ ಪಕ್ಷವಾಗಲೀ ಈ ಬಗ್ಗೆ ಗಮನ ಕೊಡದೇ ನಿರ್ಲಕ್ಷ ವಹಿಸುತ್ತಿವೆ. ಅಲ್ಲದೇ 38 ಇಲಾಖೆಗಳಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳ ಕುರಿತು ಈವರೆಗೂ ಸರಿಯಾದ ಅಂಕಿ ಅಂಶಗಳನ್ನು ನೀಡದೇ ಎಲ್ಲಾ ಇಲಾಖೆಗಳು ಪರಿಶಿಷ್ಟರ ಹಿತಾಸಕ್ತಿ ವಿರುದ್ಧ ಕೆಲಸ ಮಾಡುತ್ತಿವೆ ಹಾಗೂ ಇಂಥಹ ಇಲಾಖೆ ಮುಖ್ಯಸ್ಥರ ಮೇಲೆ ಕ್ರಮ ಜರುಗಿಸುತ್ತಿಲ್ಲದಿರುವುದು ಕೂಡ ಅಕ್ಷಮ್ಯ ಅಪರಾಧವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಗೆದ್ದಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಶಾಸಕರು, ಸಚಿವರುಗಳು, ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಯಾರಿಗೂ ಕಿವಿ ಬಾಯಿ ಇಲ್ಲದಂತಾಗಿದೆ” ಎಂದು ಶಾಸಕರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

“ಕಳೆದ 2023ರ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದರಿಂದ ಬಹುತೇಕ ಎಲ್ಲ ಒಳಮೀಸಲಾತಿ ಹೋರಾಟಗಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಕಾರಣ ಸರ್ಕಾರ ರಚನೆಯಾಗಿರುವುದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು. ಇನ್ನಾದರೂ ಎಚ್ಚೆತ್ತು ಕಲಂ 7ಸಿ ರದ್ದು ಪಡಿಸಿ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಅನುದಾನ ನೀಡುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ” ಒತ್ತಾಯಿಸಿದರು.
ಇದೆ ವೇಳೆ ದಸಂಸ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ ಮಾತನಾಡಿ, “ಎಸ್‌ಸಿಎಸ್‌ಪಿ-ಟಿಎಸ್‌ಪಿ 2013 ಕಾಯ್ದೆಯ ಕಾಲಂ 7ಸಿ ಕೂಡಲೇ ರದ್ದುಗೊಳಿಸಬೇಕು ಹಾಗೂ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಉಪಯೋಗಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾಯ್ದೆಯ ಕಲಂ 24ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಬೇಕೆಂದು” ಆಗ್ರಹಿಸಿದರು.
ಸರ್ಕಾರದ 38 ಇಲಾಖೆಗಳ ಬ್ಯಾಕ್ ಲಾಗ್ ಹುದ್ದೆಗಳ ಕುರಿತಂತೆ ಅಂಕಿ ಅಂಶ ನೀಡದಿರುವ ಇಲಾಖಾ ಮುಖ್ಯಸ್ಥರ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ Empirical ಇಂಪಿರಿಕಲ್ ಡೇಟಾ (ದತ್ತಾಂಶ) ಪಡೆದ ತಕ್ಷಣವೇ 101 ಪರಿಶಿಷ್ಟ ಜಾತಿಗಳ ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಬಂಧನ
ಈ ಸಂದರ್ಭದಲ್ಲಿ ಭರತ ಧನ್ನಾ, ಬಸವರಾಜ ಮಯೂರ, ವಿಜಯಕುಮಾರ್ ಟೈಗರ್, ಶಿವಪುತ್ರ ಹಾಗರಗಿ, ಶಿವಕುಮಾರ್ ಅಜಾದಪೂರ್, ಮಡಿವಾಳಪ್ಪ ಕಟ್ಟಿಮನಿ, ಭಾಗಪ್ಪ ಕಟ್ಟಿಮನಿ, ಯಲ್ಲಪ್ಪ ದೊಡ್ಡಮನಿ, ಅಭಿಷೇಕ ಉಪಾಧ್ಯಕ್ಷ, ಅರುಣಕುಮಾರ ಇನಾಂದಾರ, ಗೌತಮ ಉಪಾಧ್ಯಕ್ಷ, ರವಿ ಮಂತ್ರಿ ಇನ್ನಿತರರು ಇದ್ದರು.