ಕೇಂದ್ರದ ಮಾಜಿ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ದಿಟ್ಟತನದ ನಿರ್ಧಾರದಿಂದ ಹೈದರಾಬಾದ್ ಕರ್ನಾಟಕ ಪ್ರದೇಶ ಭಾರತ ಒಕ್ಕೂಟ ಸೇರಲು ಅನುಕೂಲವಾಗಿದೆ ಎಂದು ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ
ಉತ್ಸವ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ರಮಾನಂದ ತೀರ್ಥ, ಬಸಪ್ಪ ಸಜ್ಜನಶೆಟ್ಟಿ, ಶರಣಗೌಡ ಇನಾಮದಾರ ಸೇರಿದಂತೆ ಅನೇಕ ಹೋರಾಟಗಾರರ ಶ್ರಮದಿಂದ ಇಂದಿನ ಕಲ್ಯಾಣ ಕರ್ನಾಟಕ ಅಭಿವೃದ್ದಿಯಾಗುತ್ತಿದೆ. ರಾಜ್ಯಸಭೆ ವಿರೋಧಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರ್ಮಸಿಂಗ್ ಅವರ ಯಶಸ್ಸಿನಿಂದ 371(ಜೆ) ಜಾರಿಗೊಳಿಸಿದ್ದಾರೆ. ಇದರ ಪ್ರತಿಫಲವಾಗಿ ನಾನು ತಹಶೀಲ್ದಾರ್ ಆಗಿ ನೇಮಕವಾಗಿದ್ದೇನೆ. ಕಡ್ಡಾಯವಾಗಿ ಪ್ರತಿಯೊಬ್ಬರೂ ಶಿಕ್ಷಣ ಕಲಿಯಬೇಕು. ತಮ್ಮ ಎಲ್ಲ ಮಕ್ಕಳನ್ನೂ ಶಾಲೆಗೆ ಕಳುಹಿಸಬೇಕು” ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, “ಮುಂಬಡ್ತಿಯಲ್ಲಿ ದೋಷಗಳು ಇರುವುದರಿಂದ 371(ಜೆ) ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕಾಗಿದೆ” ಎಂದರು.
ಇದೇ ವೇಳೆ ಕ್ಷೇತ್ರ ಶಿಕ್ಷಣ ಇಲಾಖೆಯ ಮಲಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗೀತಾ ಯಡ್ರಾಮಿ, ಆಶಾ ಕಾರ್ಯಕರ್ತೆ ವಿಜ್ಜುಬಾಯಿ, ಪಿಡಬ್ಲ್ಯೂಡಿ ಇಲಾಖೆಯ ಮಹ್ಮದ್ ಮೌಸೀನ್ ಅವರನ್ನು ಉತ್ತಮ ಸರ್ಕಾರಿ ನೌಕರರೆಂದು ಸನ್ಮಾನಿಸಿ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ನಗರಸಭೆಯ ನಿರ್ಲಕ್ಷ್ಯಕ್ಕೆ ಮುಚ್ಚಿದ ಶೌಚಾಲಯ; ಸಾರ್ವಜನಿಕರ ಪರದಾಟ
ತಾ.ಪಂ ಇಒ ಆಕ್ರಂ ಪಾಶಾ, ಪಿಎಸ್‌ಐ ಚಂದ್ರಾಮಪ್ಪ, ತಾಲೂಕಿನ ವಿವಿಧ ಅಧಿಕಾರಿಗಳಾದ ಪಂಡಿತ್ ಸಿಂಧೆ, ಶಶಿಧರ ಬಿರಾದಾರ್, ಸವಿತಾ ಗೋಣಿ, ವಿಜಯಕುಮಾರ ಬಡಿಗೇರ, ಮಲ್ಲಿಕಾರ್ಜುನ ಸೇಡಂ, ಪ್ರಲ್ಹಾದ ವಿಶ್ವಕರ್ಮ, ಅಶ್ವಥನಾರಾಯಣ ಕುಲಕರ್ಣಿ,
ಸುನಿಲ ಯನಗುಂಟಿಕರ್, ಲಕ್ಷ್ಮೀನಾರಾಯಣ, ವಿಠಲ ಬಂಡಗಾರ ಸೇರಿದಂತೆ ಇತರರು ಇದ್ದರು.
ವರದಿ : ಸಂತೋಷಕುಮಾರ್ ಕಟ್ಟಿಮನಿ