ಕಲಬುರಗಿ ಜಿಲ್ಲೆಯ ರೈತರ ಬೇಡಿಕೆಗಳಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ, ನಗರದ ಜಗತ್ ಸರ್ಕಲ್‌ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲೆಗೆ ತಕ್ಷಣವೇ ಬರಗಾಲ ಘೋಷಣೆ, ಅತಿವೃಷ್ಟಿಯಿಂದ ಉಂಟಾದ ಹಾನಿಗೆ ತುರ್ತು ಪರಿಹಾರ, ಹಿಂಗಾರು ಬಿತ್ತನೆಗಾಗಿ ಉಚಿತವಾಗಿ ಬೀಜ ಮತ್ತು ರಸಗೊಬ್ಬರ ವಿತರಣೆ, ಅತಿವೃಷ್ಟಿಯಿಂದ ಬೆಳೆ ನಾಶವಾದ ಪರಿಣಾಮ ದಿನೇ ದಿನೇ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸಾಲ ಮನ್ನಾ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ರೈತ ಸಂಘಟನೆಗಳ ಮುಖಂಡರು ಮತ್ತು ಸಮಾಜದ ಪ್ರಗತಿಪರ ಚಿಂತಕರು ಮನವಿ ಮಾಡಿದ್ದಾರೆ.
ಧರಣಿಯಲ್ಲಿ ಮಾತನಾಡಿದ ಶಿವುಪ್ರಭು ಪಾಟೀಲ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ರೈತರ ಸಂಕಷ್ಟಗಳಿಗೆ ಸರ್ಕಾರ ಕಿವಿಗೊಡದಿರುವುದನ್ನು ಖಂಡಿಸಿದರು ಮತ್ತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
KPRS ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ, KRRS ಅಧ್ಯಕ್ಷ ದಯಾನಂದ ಪಾಟೀಲ, ಉಪಾಧ್ಯಕ್ಷ ಉಮಾಪತಿ ಪಾಟೀಲ್, ಭೀಮಾಶಂಕರ ಮಾಡಿಯಾಳ (AIKS), ಮೌಲಾ ಮುಲ್ಲಾ (AIKS), KRRHS ಅಧ್ಯಕ್ಷ ಮಹಾಂತ ಗೌಡಾ ನಂದಿಹಳ್ಳಿ ಮತ್ತು ನಾಗಲಿಂಗಯ್ಯ ಮಠಪತಿ (ಪ್ರಗತಿಪರ ಚಿಂತಕರು ಮತ್ತು ಬಸವಣ್ಣನ ಅನುಯಾಯಿ) ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಇದನ್ನೂ ಓದಿ: ಕಲಬುರಗಿ | ಅಶೋಕ ವಿಜಯದಶಮಿ ಅಂಗವಾಗಿ ಪಂಚಶೀಲ ಧ್ವಜಾರೋಹಣ
ಇದೆ ವೇಳೆ ರೈತ ಮಹಿಳೆಯರಾದ ಸುಶೀಲಾ ಬಿ ಮತ್ತು ಶಾಂತಾಬಾಯಿ ರಾಠೋಡ, ಜೊತೆಗೆ ಕರೆಪ್ಪಾ ಕರಗೋಂಡ ಮತ್ತು ಶರಣ ಗೌಡ ಪಾಟೀಲ್ ಭಣಮಗಿ ಕೂಡ ಸತ್ಯಾಗ್ರಹ ವೇದಿಕೆಯಲ್ಲಿ ಹಾಜರಾಗಿ ಬೆಂಬಲ ಸೂಚಿಸಿದರು.
ರೈತರ ಹೋರಾಟ ಮುಂದುವರಿದಂತೆ, ಜಿಲ್ಲೆಯಾದ್ಯಂತ ಸರ್ಕಾರದ ವಿರುದ್ಧ ಅಸಮಾಧಾನದ ಧ್ವನಿ ಗಟ್ಟಿಯಾಗುತ್ತಿದೆ. ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಸಿವೆ.
