ಕಲಬುರಗಿ ಜಿಲ್ಲೆಯಲ್ಲಿರುವ ಸೇಡಂ ಪಟ್ಟಣದ ಉಡಗಿ ರೋಡ್ ಹತ್ತಿರವಿರುವ ಸ್ಲಮ್‌ಬೋರ್ಡ್ ಬಡಾವಣೆಯು ಹೆಸರಿಗಷ್ಟೇ ಬಡಾವನೆ. ಆದರೆ, ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಕಷ್ಟ ಹೇಳತೀರದ್ದು.
ಸುಮಾರು ಎರಡು ವರ್ಷಗಳಿಂದ ಸರಿಯಾಗಿ ಕುಡಿಯುವ ನೀರಿಲ್ಲದೆ ಸ್ಲಮ್ ಬೋರ್ಡ್ ಬಡಾವಣೆಯ ನಿವಾಸಿಗರು ದಿನನಿತ್ಯ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲೂ ಕೂಡ ಸರಿಯಾಗಿ ನೀರು ಸರಬರಾಜು ಆಗದ್ದರಿಂದ ಇಲ್ಲಿನ ಮಹಿಳೆಯರು ಬೋರ್‌ವೆಲ್ ಮೂಲಕ ನೀರು ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಡಾವಣೆಯಲ್ಲಿ ಸುಮಾರು ಎರಡು ವರ್ಷಗಳಿಂದ ರಾತ್ರಿ ವೇಳೆಯಲ್ಲಷ್ಟೇ ಕೆಲವೊಮ್ಮೆ ಪುರಸಭೆಯ ಅಧಿಕಾರಿಗಳು ನೀರು ಬಿಡುತ್ತಾರೆ. ಇದಕ್ಕೆ ಸರಿಯಾದ ಸಮಯವೂ ಇಲ್ಲ. ಆದರೆ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಎಂದು ಬಡಾವಣೆಯ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಸರಿಯಾಗಿ ಕುಡಿಯುವ ನೀರು ಸಿಗದ ಬಗ್ಗೆ ಹಲವು ಬಾರಿ ಪುರಸಭೆ ಕಚೇರಿಗೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬಡಾವನೆಯ ಮಹಿಳೆಯರು ಕಿಡಿಕಾರಿದ್ದಾರೆ.
ಅಧಿಕಾರಿಗಳು ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆದರೆ, ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದು ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ.
ಸ್ಲಮ್ ಬೋರ್ಡ್ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೇ ಅಲ್ಲದೆ, ರಸ್ತೆ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬ ಕೇವಲ ಹೆಸರಿಗಷ್ಟೇ ಇದೆ. ವಿದ್ಯುತ್ ಯಾವಾಗ ಬರುತ್ತೋ ಗೊತ್ತಿಲ್ಲ. ಇಲ್ಲಿರುವ ಹಲವು ವಿದ್ಯುತ್ ಕಂಬಕ್ಕೆ ವಿದ್ಯುತ್ ಸಂಪರ್ಕಕ್ಕೆ ಕೇಳಿದರೂ ಕೂಡ ಸಂಬಂಧಪಟ್ಟ ಇಲಾಖೆಯವರು ಈವರೆಗೆ ಸ್ಪಂದಿಸಿಲ್ಲ. ವಿದ್ಯುತ್ ದೀಪವಿಲ್ಲದೆ ಬಡಾವಣೆಯ ಜನರು ಕತ್ತಲಿನಲ್ಲಿ ಜೀವ ಹಿಡಿದುಕೊಂಡು ಜೀವನ ನಡೆಸುತ್ತಿದ್ದಾರೆ. ಸಂಜೆ ಆದರೆ ಸಾಕು, ಹಾವು, ಚೇಳು, ಕಪ್ಪೆ ಸೇರಿದಂತೆ ಹಲವು ವಿಷಜಂತುಗಳು ರಸ್ತೆಯಲ್ಲಿ ಬರಲಾರಂಭಿಸುತ್ತದೆ. ಇದರಿಂದ ಇಲ್ಲಿನ ನಿವಾಸಿಗಳು ಸಂಜೆಯಾದ ಬಳಿಕ ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡುತ್ತಾರೆ. ಬಡಾವನೆಯ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದರೂ, ಅಧಿಕಾರಿಗಳು ಮೌನ ವಹಿಸುತ್ತಿರುವುದು ಏಕೆ? ಎಂದು ನಿವಾಸಿಗಳು ಕೇಳುತ್ತಲೇ ಇದ್ದಾರೆ.
ಬಡಾವಣೆಯ ನಿವಾಸಿ ಮಹಾದೇವಿ ಮಾತನಾಡಿ, “ಕುಡಿಯುವ ನೀರು ಸರಿಯಾಗಿ ಸರಬರಾಜು ಆಗದೆ ಸ್ಲಮ್ ಬೋರ್ಡ್ ಬಡಾವಣೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸುಳ್ಳು ನೆಪ ಹೇಳಿ, ತಮ್ಮ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದಾರೆ. ಹೀಗೆ ಮುಂದುವರೆದರೆ ಪುರಸಭೆ ಮುಂದೆ ಎಲ್ಲ ಬಡವಾಣಿಯ ಜನರು ಸೇರಿ ಪ್ರತಿಭಟನೆ ಮಾಡುತ್ತೇವೆ” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರವಿಕುಮಾರ್ ಮಾತನಾಡಿ, “ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಆಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದರೆ, ಮಳೆ ನೀರಿನಿಂದ ಪೈಪ್‌ನಲ್ಲಿ ಮರಳು ತುಂಬಿದೆ. ಆದ್ದರಿಂದ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಎರಡು ದಿನಗಳ ನಂತರ ಸರಿಪಡಿಸಿ ಕುಡಿಯುವ ನೀರು ಸರಿಯಾಗಿ ಸರಬರಾಜು ಮಾಡಲಾಗುತ್ತದೆ ಎಂದು ಹೇಳುತ್ತಾರೆ. ದಿನನಿತ್ಯವೂ ಸುಳ್ಳು ಭರವಸೆ ಕೇಳಿ ಬೇಸತ್ತು ಹೋಗಿದ್ದೇವೆ” ಎಂದು ಅಳಲು ತೋಡಿಕೊಂಡರು.
ಚುನಾವಣೆ ಸಮಯದಲ್ಲಿ ಬಡಾವನೆಗೆ ಓಡೋಡಿ ಬರುವ ಜನಪ್ರತಿನಿಧಿಗಳು, ಗೆದ್ದ ಬಳಿಕ ನಮ್ಮನ್ನು ಮರೆತು ಬಿಡುತ್ತಾರೆ. ಸುಳ್ಳು ಭರವಸೆ ನೀಡಿ, ಮತ ಪಡೆದ ಬಳಿಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗುತ್ತಾರೆ ಎಂದು ಬಡವಾಣಿಯ ಜನರು ಮಾತನಾಡುತ್ತಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಮಾತನಾಡಿ, “ಸ್ಲಮ್ ಬೋರ್ಡ್ ಬಡಾವಣೆಯಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಹೊಸದಾಗಿ ಕುಡಿಯುವ ನೀರಿನ ಟ್ಯಾಂಕ್ ಅಳವಡಿಸಲು ಪ್ರಯತ್ನಿಸುತ್ತೇವೆ. ಆ ಮೂಲಕ ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುತ್ತೇವೆ” ಎಂದು ಭರವಸೆಯಷ್ಟೇ ನೀಡಿದ್ದಾರೆ.
ಇದನ್ನು ಓದಿದ್ದೀರಾ? ‘ಬಸವಣ್ಣ ಸಾಂಸ್ಕೃತಿಕ ನಾಯಕ’ನೆಂದು ಘೋಷಿಸಿದ್ದೇ ಮನುವಾದಿಗಳಿಗೆ ತಳಮಳ!
ದಸರಾದ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಸ್ಲಮ್ ಬೋರ್ಡ್ ಬಡಾವನೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯಲ್ಲಿಯೇ ಖಾಲಿ ಕೊಡ ಹಿಡಿದು ಕೆಲ ಹೊತ್ತು ಪ್ರತಿಭಟನೆ ನಡೆಸಿ, ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀದೇವಿ, ದೂಳಮ್ಮ, ಕಮಲಾಬಾಯಿ, ಇಂದು ಬಾಯಿ, ನಾಗಮ್ಮ, ಲಕ್ಷ್ಮಿ, ಅಂಬಿಕಾ, ದೇವಮ್ಮ, ಸೀತಾ, ಲಕ್ಷ್ಮಿಬಾಯಿ, ಭಾಗ್ಯಶ್ರೀ, ನರಸಮ್ಮ, ಸಿದ್ದಮ್ಮ, ಮಲ್ಲಮ್ಮ, ಶೋಭಾ, ಶಬಾನಾ ಬೇಗಂ, ಅಂಜಮ್ಮ ಸೇರಿದಂತೆ ಇನ್ನೂ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.
ಈ ವರದಿ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರು, ವಿದ್ಯುತ್ ದೀಪಗಳು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವ ಕೆಲಸಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಸುನೀಲ್ ರಾಣಿವಾಲ್, ಮೀಡಿಯಾ ವಾಲೆಂಟಿಯರ್
