ಚಿತ್ತಾಪುರ ತಾಲ್ಲೂಕಿನ ಪೇಠಶಿರೂರ ಗ್ರಾಮದಲ್ಲಿ ನಡೆದಿದ್ದ ಒಂಟಿ ವೃದ್ಧೆ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಅಪ್ರಾಪ್ತ ಬಾಲಕ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೇಠಶಿರೂರ ಗ್ರಾಮದ ತಾನಾಜಿ ಮಾನಪ್ಪ ಬಂಡಗಾರ (25), ವಿಜಯಕುಮಾರ್ ರೇವಣಸಿದ್ದಪ್ಪ ಕರೆಗೋಳ(23), ಸಂಜೀವ್ ಕುಮಾರ್ ಹನುಮಂತರಾಯ ಕರೆಗೋಳ(25), ಅಲ್ದಿಹಾಳ ಗ್ರಾಮದ ಲಕ್ಷ್ಮಣ ಲಕ್ಷ್ಮೀಕಾಂತ್ ತಳವಾರ(24) ಹಾಗೂ 17 ವರ್ಷ ಬಾಲಕ ಬಂಧಿತರು.
ಬಂಧಿತರಿಂದ ಕಿವಿಯೋಲೆ, ಮಾಟನಿ, ಗುಂಡಿನ ಸರ, ಮೂಗುತ್ತಿ, ಲಿಂಗದ ಕಾಯಿ, ₹5,500 ಜಪ್ತಿ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.
ʼಪೇಠಶಿರೂರ ಗ್ರಾಮದಲ್ಲಿ ಜಗದೇವಿ ಲಾಳಿ (78) ಎಂಬುವರು ಒಂಟಿಯಾಗಿ ನೆಲೆಸಿದ್ದರು. ಆರೋಪಿಗಳು ವೃದ್ಧೆಯನ್ನು ಕೊಲೆ ಮಾಡಿ, ಚಿನ್ನಾಭರಣ, ನಗದು ಕದ್ದಿದ್ದರು. ಜೊತೆಗೆ ಇದೊಂದು ಸಹಜ ಸಾವು ಎಂಬಂತೆ ಬಿಂಬಿಸಿದ್ದರು. ಜಗದೇವಿ ಲಾಳಿ ಅವರು ಜುಲೈ10ರಂದು ಮೃತಪಟ್ಟಿದ್ದರು. ಅನುಮಾನಾಸ್ಪದ ಸಾವಿನ ದೂರು ದಾಖಲಾಗಿತ್ತು. ಸ್ಥಳ ಮಹಜರು ನಡೆಸಿದ್ದಾಗ ಅನುಮಾನ ಮೂಡಿತ್ತು. ಪ್ರಾಥಮಿಕ ತನಿಖೆ ನಡೆಸಿ, ತಾಂತ್ರಿಕ ಮಾಹಿತಿ ಕಲೆ ಹಾಕಿದಾಗ ಇದೊಂದು ಕೊಲೆ ಎಂಬ ಶಂಕೆಯಿಂದ ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಯಿತು’ ಎಂದು ವಿವರಿಸಿದರು.
ʼಆರೋಪಿಗಳು ಮಧ್ಯಾಹ್ನದ ಹೊತ್ತಲ್ಲಿ ಮನೆಯನ್ನು ಹಿಂದಿನ ಬಾಗಿಲಿನಿಂದ ಹೊಕ್ಕಿದ್ದರು. ಮುಂಬಾಗಿಲಿನ ಒಳಕೊಂಡಿ ಹಾಕಿ, ಸೀರೆಯಿಂದ ಕುತ್ತಿಗೆಗೆ ಸುತ್ತಿ, ತಲೆಗೆ ರಾಡ್ನಿಂದ ಹೊಡೆದಿದ್ದು, ಕೊಲೆ ಮಾಡಿದ್ದರು. ವೃದ್ಧೆಯ ಕೊರಳಲ್ಲಿದ್ದ ಗುಂಡಿನ ಸರ, ಅಲಮಾರಿಯಲ್ಲಿದ್ದ ₹21 ಸಾವಿರ, ಲಿಂಗದ ಕಾಯಿ ಕದ್ದು, ಅಜ್ಜಿಯನ್ನು ಸಹಜ ಸ್ಥಿತಿಯಲ್ಲಿ ಮಲಗಿಸಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದರು. ಸ್ಥಳ ಮಹಜರು ನಡೆಸಿದಾಗ ಮೂಡಿದ ಅನುಮಾನದಿಂದ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಪ್ರೇಕ್ಷಕರ ಮನಸೂರೆಗೊಂಡ ʼರಮಾಬಾಯಿ ಅಂಬೇಡ್ಕರ್ʼ ನಾಟಕ
ಈ ಸಂಬಂಧ ಮಾಡಬೂಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ, ಅತ್ಯಂತ ಕ್ಲಿಷ್ಟಕರ, ಮುಚ್ಚಿಹೋಗಬಹುದಾದ ಪ್ರಕರಣ ಭೇದಿಸುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಗೌತಮ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಇದ್ದರು.