ಅನುದಾನ ಬಿಡುಗಡೆಗೆ ಬೇಡಿಕೆ ಇಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಳಂದ ಶಾಸಕ ಬಿ.ಆರ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಆ ಪತ್ರವನ್ನು ನಾನು ಬರೆದಿಲ್ಲ. ಯಾರೋ ಕಿಡಿಗೇಡಿಗಳು ನಕಲಿ ಪತ್ರ ಸೃಷ್ಟಿಸಿದ್ದಾರೆ’ ಎಂದಿರುವ ಶಾಸಕ ಬಿ.ಆರ್ ಪಾಟೀಲ್ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
“ನಕಲಿ ಲೆಡರ್‌ಹೆಡ್ ಬಳಸಿಕೊಂಡು ನನ್ನ ಹೆಸರಿನಲ್ಲಿ ಪತ್ರ ಬರೆದು, ವೈರಲ್ ಮಾಡಿದ್ದಾರೆ. ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ನಡುವೆ ದ್ವೇಷ ಹುಟ್ಟುಹಾಕಲು ಪ್ರಯತ್ನಿಸಿದ್ದಾರೆ. ರಾಜಕೀಯ ಹುನ್ನಾರದಿಂದ ಈ ಪತ್ರ ಸೃಷ್ಠಿಸಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ವೈರಲ್ ಆಗಿರುವ ನಕಲಿ ಪತ್ರದಲ್ಲಿರುವ ಲೆಟರ್‌ಹೆಡ್ ಈಗಿನದ್ದಲ್ಲ. ನಾನು ಕಳೆದ ಬಾರಿ ಶಾಸಕನಾಗಿದ್ದಾಗ ವಾಸವಿದ್ದ ಕಲಬುರಗಿ ಶಾಂತಿನಗರದ ಹಳೇ ವಿಳಾಸವಿರುವ ಈ ಹೆಟ್‌ಹೆಡ್‌ಅನ್ನು ಕಿಡಿಗೇಡಿಗಳು ಕಲರ್ ಜೆರಾಕ್ಸ್ ಮಾಡಿಕೊಂಡು, ಪತ್ರ ಸೃಷ್ಟಿಸಿದ್ದಾರೆ. ನಾನು ನಾಲ್ಕು ವರ್ಷದಿಂದ ಕಲಬುರಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸಿಸುತ್ತಿದ್ದೇನೆ. ನನ್ನ ಈಗಿನ ಲೆಟರ್‌ಹೆಡ್‌ನಲ್ಲಿ ಹೊಸ ವಿಳಾಸವಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನಕಲಿ ಪತ್ರ ಸೃಷ್ಟಿಸಿ, ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ತನಿಖೆಯಾಗಬೇಕು. ಪತ್ರದ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಬಯಲಿಗೆ ತರಬೇಕು. ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.